ತ್ಯಾಜ್ಯದಿಂದ ಸ್ವಾತಂತ್ರ್ಯಅಭಿಯಾನ: ಬೆಂಗಳೂರಿನಲ್ಲಿ 6 ದಿನಗಳಲ್ಲಿ 453 ಸ್ಥಳಗಳಿಂದ 10,056 ಮೆಟ್ರಿಕ್ ಟನ್ C & D ತ್ಯಾಜ್ಯ ತೆರವು!

ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು ತಮ್ಮ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ತ್ಯಾಜ್ಯವನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ, ನಗರ ಪಾಲಿಕೆ ಆಯುಕ್ತರಿಗೆ ಶುಕ್ರವಾರ ಸೂಚನೆ ನೀಡಿದರು.
Freedom from Waste" campaign
ತ್ಯಾಜ್ಯ ತೆರವುಗೊಳಿಸಿದ ಪೌರ ಕಾರ್ಮಿಕರು
Updated on

ಬೆಂಗಳೂರು: ಬೆಂಗಳೂರು ನಗರದಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಮತ್ತಷ್ಟು ವೇಗ ಪಡೆದುಕೊಳ್ಳುತ್ತಿದೆ.

ಆಗಸ್ಟ್ 1ರಿಂದ ಆಗಸ್ಟ್ 6ರವರೆಗೆ 453 ಸಾರ್ವಜನಿಕ ಸ್ಥಳಗಳಿಂದ 10,056 ಮೆಟ್ರಿಕ್ ಟನ್ ಸಿ & ಡಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ನಗರದಾದ್ಯಂತ "ತ್ಯಾಜ್ಯದಿಂದ ಸ್ವಾತಂತ್ರ್ಯ" ಅಭಿಯಾನ ವೇಗ ಪಡೆಯುತ್ತಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳದ ಸರ್ಕಾರಿ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ, ನಗರ ಪಾಲಿಕೆ ಆಯುಕ್ತರಿಗೆ ಶುಕ್ರವಾರ ಸೂಚನೆ ನೀಡಿದರು.

ಜಿಬಿಎ ವ್ಯಾಪ್ತಿಯಲ್ಲಿ "ತ್ಯಾಜ್ಯದಿಂದ ಸ್ವಾತಂತ್ರ್ಯ" ಅಭಿಯಾನಕ್ಕೆ ಸಂಬಂಧಿಸಿದಂತೆ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು ತಮ್ಮ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ತ್ಯಾಜ್ಯವನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ಅಗತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳದ ಸರ್ಕಾರಿ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದರು.

ಇದೇ ರೀತಿಯಲ್ಲಿ ಇತರೆ ಇಲಾಖೆಗಳು ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳ ಮಾಹಿತಿಯನ್ನೂ ಸಂಗ್ರಹಿಸಬೇಕು. ತ್ಯಾಜ್ಯ ತೆರವು ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂಬುದು ನಾಗರಿಕರಿಗೆ ಅರಿವಾಗುವ ರೀತಿಯಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು. ಅಭಿಯಾನದ ಆರಂಭಿಕ ಹಂತದಲ್ಲಿ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ. ಯಾವುದೇ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಅವುಗಳಿಗೆ ತ್ವರಿತ ಪರಿಹಾರ ಕಂಡುಹಿಡಿದು, ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸ್ವಚ್ಛತಾ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಬೇಕು ಎಂದು ತಿಳಿಸಿದರು.

ಮಳೆಯ ಸಮಯದಲ್ಲಿ ಕ್ವಾರಿಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಟ್ಟಡ ನಿರ್ಮಾಣದ ಭಗ್ನಾವಶೇಷಗಳನ್ನು ಸರ್ಕಾರ ಗುರುತಿಸಿರುವ ನಿಗದಿತ ಸ್ಥಳಗಳಲ್ಲಿಯೇ ವಿಲೇವಾರಿ ಮಾಡಬೇಕು. ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಸಿ & ಡಿ ತ್ಯಾಜ್ಯ ವಿಲೇವಾರಿ ಮಾಡುವ ನಿಗದಿತ ಸ್ಥಳಗಳಲ್ಲಿ ಮೇಲ್ವಿಚಾರಣೆಗಾಗಿ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದ್ದು, ಅವರಿಗೆ ಶೆಲ್ಟರ್, ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ, ಟಿಪ್ಪರ್ ವಾಹನಗಳ ಆಗಮನ ಮತ್ತು ನಿರ್ಗಮನದ ವಿವರಗಳನ್ನು ರಿಜಿಸ್ಟರ್‌ನಲ್ಲಿ ಸಮರ್ಪಕವಾಗಿ ದಾಖಲಿಸಬೇಕು ಎಂದು ಸೂಚಿಸಿದರು. ಪ್ರಸ್ತುತ 54 ಟಿಪ್ಪರ್ 18 ಜೆಸಿಬಿ ವಾಹನದ ಮೂಲಕ 5 ನಗರ ಪಾಲಿಕೆಗಳಲ್ಲಿ ತ್ಯಾಜ್ಯ ತೆರವುಗೊಳಿಸಲಾಗುತ್ತಿದ್ದು, ಟಿಪ್ಪರ್ ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಅದರ ಜೊತೆಗೆ ಅವಶ್ಯಕತೆಯಿರುವ ಜೆಸಿಬಿ, ಟ್ರ್ಯಾಕ್ಟರ್, ಹಿಟಾಚಿಗಳನ್ನು ಕೂಡಾ ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ದೇಶನ ನೀಡಿದರು.

3,022 ಹೊಸ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಗುರುತು: ಅಧಿಕಾರಿಗಳು ಹಾಗೂ ಮಾರ್ಷಲ್‌ಗಳು ಇದುವರೆಗೆ ನಗರದಲ್ಲಿ 3,022 ಸಿ&ಡಿ ತ್ಯಾಜ್ಯ ಸುರಿದಿರುವ ಸ್ಥಳಗಳನ್ನು ಗುರುತಿಸಿದ್ದು, ಅಲ್ಲಿ ಅಂದಾಜು 59,823 ಮೆಟ್ರಿಕ್ ಟನ್ ತ್ಯಾಜ್ಯ ಇರುವುದಾಗಿ ಪತ್ತೆಯಾಗಿದೆ. ಈ ಸ್ಥಳಗಳ ಪರಿಶೀಲನೆ ನಡೆಸಿ, ಈಗಾಗಲೇ ಗುರುತಿಸಲಾದ ಸ್ಥಳಗಳ ಪುನರಾವರ್ತನೆಯಾಗದಂತೆ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

ಟಿಪ್ಪರ್ ಗಳ ಸಂಚಾರ ಕುರಿತು ಚರ್ಚಿಸಿ: ಸಂಚಾರಿ ಪೊಲೀಸ್ ವಿಭಾಗದ ಅಧಿಕಾರಿಗಳು ಬೆಳಿಗ್ಗೆ 7.00ರಿಂದ 10.00 ಗಂಟೆಯವರೆಗೆ ಹಾಗೂ ಸಂಜೆ 5.00ರಿಂದ 9.00 ಗಂಟೆಯವರೆಗೆ ತ್ಯಾಜ್ಯ ತೆರವುಗೊಳಿಸುತ್ತಿರುವ ಟಿಪ್ಪರ್ ವಾಹನಗಳ ಸಂಚಾರಕ್ಕೆ ಅನುಮತಿ ನೀಡುತ್ತಿಲ್ಲ. ಇದರಿಂದ ತ್ಯಾಜ್ಯ ತೆರವು ಕಾರ್ಯಕ್ಕೆ ಅಡಚಣೆಯಾಗುತ್ತಿದೆ. ಈ ಸಂಬಂಧ ಮುಖ್ಯ ಆಯುಕ್ತರು ಸಂಚಾರಿ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, "ತ್ಯಾಜ್ಯದಿಂದ ಸ್ವಾತಂತ್ರ್ಯ" ಅಭಿಯಾನದಲ್ಲಿ ಕಾರ್ಯನಿರ್ವಹಿಸುವ ವಾಹನಗಳಿಗೆ ಎಲ್ಲಾ ಸಮಯದಲ್ಲಿಯೂ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ನಿರ್ದೇಶನದಂತೆ ರೈಲ್ವೆ ಇಲಾಖೆಯ ಜಮೀನುಗಳಲ್ಲಿ ಸ್ವಚ್ಛತಾ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆರಂಭವಾಗಿಲ್ಲ. ಈ ಸಂಬಂಧ ಮುಖ್ಯ ಆಯುಕ್ತರು ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯವನ್ನು ತ್ವರಿತಗೊಳಿಸುವಂತೆ ಸೂಚಿಸಲಾಯಿತು.

Freedom from Waste" campaign
Watch | Freedom from waste: 'ಬೆಂಗಳೂರು ಸರ್ಕಾರದ ಆಸ್ತಿ ಅಲ್ಲ, ಜನರ ಆಸ್ತಿ, ಅದನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಿ'

ನಗರ ಪಾಲಿಕೆವಾರು ತ್ಯಾಜ್ಯ ತೆರವು ವಿವರ:

* ಬೆಂಗಳೂರು ಕೇಂದ್ರ ನಗರ ಪಾಲಿಕೆ: 537 ಮೆ.ಟನ್

* ಬೆಂಗಳೂರು ಪೂರ್ವ ನಗರ ಪಾಲಿಕೆ: 1,448 ಮೆ.ಟನ್

* ಬೆಂಗಳೂರು ಉತ್ತರ ನಗರ ಪಾಲಿಕೆ: 3,819 ಮೆ.ಟನ್

* ಬೆಂಗಳೂರು ದಕ್ಷಿಣ ನಗರ ಪಾಲಿಕೆ: 1,672 ಮೆ.ಟನ್

* ಬೆಂಗಳೂರು ಪಶ್ಚಿಮ ನಗರ ಪಾಲಿಕೆ: 2,580 ಮೆ.ಟನ್

ಒಟ್ಟು: 10,056 ಮೆಟ್ರಿಕ್ ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com