ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ: ಅಧಿವೇಶನಕ್ಕೂ ಮುನ್ನ ಬಿಕ್ಕಟ್ಟು ಶಮನಕ್ಕೆ ಡಿಕೆಶಿ ಪ್ಲ್ಯಾನ್‌; ಹೈಕಮಾಂಡ್‌ ಮಧ್ಯಸ್ಥಿಕೆಗೆ ಕೋರಿ ದೆಹಲಿಗೆ ದೌಡು..?

ಆ. 3ರಂದು ಡಿ.ಕೆ. ಶಿವಕುಮಾರ್‌ ನೇತೃತ್ವದ ಸಚಿವ ಸಂಪುಟದ ಮೊದಲ ಹಂತದ ವಿಸ್ತರಣೆಯಲ್ಲಿ 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಹಲವು ದಿನಗಳು ಕಳೆದರೂ ಖಾತೆ ಹಂಚಿಕೆಯಾಗದಿರುವುದು ಕಾಂಗ್ರೆಸ್‌ ಸರ್ಕಾರದೊಳಗೆ ಅಸಮಾಧಾನಕ್ಕೆ ಭುಗಿಲೇಳುವಂತೆ ಮಾಡಿದೆ.
CM DK Shivakumar
ಡಿಕೆ.ಶಿವಕುಮಾರ್.
Updated on

ಬೆಂಗಳೂರು: ಇತ್ತೀಚಿನ ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಅಸಮಾಧಾನ ಹಾಗೂ ಸಚಿವರಿಗೆ ಖಾತೆ ಹಂಚಿಕೆ ವಿಳಂಬದ ಸಮಸ್ಯೆ ಬಗೆಹರಿಸಲು ಪಕ್ಷದ ಹೈಕಮಾಂಡ್‌ ಮಧ್ಯಸ್ಥಿಕೆ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾನುವಾರ ಸಂಜೆ ನವದೆಹಲಿಗೆ ತೆರಳುವ ಸಾಧ್ಯತೆ ಇದೆ.

ಆದರೆ, ಮುಖ್ಯಮಂತ್ರಿ ದೆಹಲಿ ಪ್ರವಾಸದ ಕುರಿತು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ಅಧಿಕೃತವಾಗಿ ಖಚಿತಪಡಿಸಿಲ್ಲ.

ಒಂದು ವೇಳೆ ಅವರ ದೆಹಲಿ ಪ್ರವಾಸ ಮುಂದೂಡಿಕೆಯಾದರೆ, ಸಚಿವರಿಗೆ ಖಾತೆ ಹಂಚಿಕೆ ಕೂಡ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್‌ 3ರಂದು ಡಿ.ಕೆ. ಶಿವಕುಮಾರ್‌ ನೇತೃತ್ವದ ಸಚಿವ ಸಂಪುಟದ ಮೊದಲ ಹಂತದ ವಿಸ್ತರಣೆಯಲ್ಲಿ 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಹಲವು ದಿನಗಳು ಕಳೆದರೂ ಖಾತೆ ಹಂಚಿಕೆಯಾಗದಿರುವುದು ಕಾಂಗ್ರೆಸ್‌ ಸರ್ಕಾರದೊಳಗೆ ಅಸಮಾಧಾನಕ್ಕೆ ಭುಗಿಲೇಳುವಂತೆ ಮಾಡಿದೆ.

ಆಗಸ್ಟ್‌ 13ರಿಂದ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನ ಸಚಿವ ಸಂಪುಟಕ್ಕೆ ಸಂಬಂಧಿಸಿದ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಶಿವಕುಮಾರ್‌ ಬಯಸಿದ್ದಾರೆ.

ಇಲ್ಲದಿದ್ದರೆ ಬಿಜೆಪಿ ಮತ್ತು ಜೆಡಿಎಸ್‌ ಈ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.

ಪ್ರಸ್ತುತ ಕಾಂಗ್ರೆಸ್‌ ಹೈಕಮಾಂಡ್‌ ಮುಂದಿರುವ ಪ್ರಮುಖ ಮೂರು ಸವಾಲುಗಳೆಂದರೆ, ಖಾಲಿ ಇರುವ ಒಂದು ಸಚಿವ ಸ್ಥಾನಕ್ಕೆ ಮಹಿಳೆಗೆ ಅವಕಾಶ ಕಲ್ಪಿಸುವುದು, ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರನ್ನು ಸಮಾಧಾನಪಡಿಸುವುದು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲ ಹೊಂದಿರುವ ಬಾದಾಮಿ ಶಾಸಕ ಬಸವರಾಜ ಶಿವಣ್ಣನವರ್‌ ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವುದು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂ. ಕೃಷ್ಣಪ್ಪ ಅವರ ಪುತ್ರ ಪ್ರಿಯಾ ಕೃಷ್ಣ ಈಗಾಗಲೇ ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಅವರು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದು, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲು ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

CM DK Shivakumar
ಸಚಿವ ಸಂಪುಟ ವಿಸ್ತರಣೆ ಅಸಮಾಧಾನದ ಜೊತೆಗೆ ಕಿಚ್ಚು ಹಚ್ಚಲಿದೆ 'ಖಾತೆ' ಹಂಚಿಕೆ: ಕಾಂಗ್ರೆಸ್ ಗೆ ಮತ್ತೊಂದು ಹೊಸ ತಲೆನೋವು!

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಅವರ ಸಲಹೆಯಂತೆ, ಶುಕ್ರವಾರ ಸಂಜೆ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿರುವ ಡಿ.ಕೆ. ಶಿವಕುಮಾರ್‌, ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಸಚಿವ ಸಂಪುಟದಲ್ಲಿನ ಅಸಮಾಧಾನವನ್ನು ಹೇಗೆ ಬಗೆಹರಿಸಬೇಕು ಎಂಬುದರ ಕುರಿತು ದೆಹಲಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಗತ್ಯವಿದ್ದರೆ ಈಗಾಗಲೇ ಸಚಿವರಾಗಿರುವ ಒಬ್ಬರು ಅಥವಾ ಇಬ್ಬರನ್ನು ಬದಲಿಸಿ ಅಸಮಾಧಾನಗೊಂಡಿರುವ ನಾಯಕರಿಗೆ ಅವಕಾಶ ನೀಡುವ ವಿಚಾರದಲ್ಲೂ ರಾಹುಲ್‌ ಗಾಂಧಿ ಮಧ್ಯಪ್ರವೇಶಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ ಎಂದು ಪಕ್ಷದ ಆಂತರಿಕ ಮೂಲವೊಂದು ತಿಳಿಸಿದೆ.

ಆದರೆ, ಸಂಪುಟ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಹೈಕಮಾಂಡ್‌ ಯಾರಿಗೆ ಸಚಿವ ಸ್ಥಾನ ತ್ಯಜಿಸುವಂತೆ ಸೂಚಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇತ್ತೀಚೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಸಚಿವರು ಈಗಾಗಲೇ ತಮ್ಮ ಜಿಲ್ಲೆಗಳಿಗೆ ತೆರಳಿ ಬರ ಪರಿಸ್ಥಿತಿಯ ಪರಿಶೀಲನೆ ಸೇರಿದಂತೆ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ನಡುವೆ, ನಾಗಮಂಗಲ ಶಾಸಕ ಹಾಗೂ ಸಚಿವ ಎನ್‌. ಚಲುವರಾಯಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಎಂ. ಕೃಷ್ಣಪ್ಪ ಅವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ಬದಲಾವಣೆ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಚಲುವರಾಯಸ್ವಾಮಿ ಅವರು ಸಿದ್ದರಾಮಯ್ಯ ಅವರ ಹಿಂದಿನ ಸಚಿವ ಸಂಪುಟದಲ್ಲಿ ಮೂರು ವರ್ಷಗಳ ಕಾಲ ಸಚಿವರಾಗಿದ್ದರು. ಎಂ. ಕೃಷ್ಣಪ್ಪ ಅವರು ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈಗಾಗಲೇ ಮಂಡ್ಯ ಜಿಲ್ಲೆಯಿಂದ ಮತ್ತೊಬ್ಬ ಸಚಿವ ಪಿ.ಎಂ. ನರೇಂದ್ರಸ್ವಾಮಿ ಕೂಡ ಇದ್ದಾರೆ.

ಮತ್ತೊಂದೆಡೆ, ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರನ್ನೂ ಸಚಿವ ಸ್ಥಾನದಿಂದ ಕೈಬಿಡುವ ಸಾಧ್ಯತೆ ಇದೆ ಎಂಬ ವದಂತಿ ಹರಿದಾಡಿತ್ತು. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಚಲುವರಾಯಸ್ವಾಮಿ, ಸಂಪುಟದಲ್ಲಿ ಯಾವುದೇ ಬದಲಾವಣೆ ನಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಎಚ್‌.ಸಿ. ಬಾಲಕೃಷ್ಣ ಕೂಡ ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, ಪಕ್ಷದ ಹಿತಾಸಕ್ತಿ ಕಾಪಾಡಬೇಕಾದರೆ 30 ಸಚಿವರೇ ರಾಜೀನಾಮೆ ನೀಡಬೇಕಾಗುತ್ತದೆ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ಬಳ್ಳಾರಿ ಗ್ರಾಮೀಣ ಶಾಸಕ ಹಾಗೂ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಸಂಡೂರು ಶಾಸಕಿಯೂ ಆಗಿರುವ ಬಳ್ಳಾರಿ ಸಂಸದ ಇ. ತುಕಾರಾಂ ಅವರ ಪತ್ನಿ ಇ. ಅನ್ನಪೂರ್ಣ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆಯೂ ನಡೆಯುತ್ತಿದೆ.

ಇದರಿಂದ ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಹಾಗೂ ಮಹಿಳಾ ಕೋಟೆ ಎರಡನ್ನೂ ಒಂದೇ ಬಾರಿಗೆ ಸರಿಪಡಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ವಲಯದಲ್ಲಿದೆ ಎನ್ನಲಾಗಿದೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಬಿ. ನಾಗೇಂದ್ರ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದೂ ಈ ಚರ್ಚೆಗೆ ಮತ್ತೊಂದು ಕಾರಣವಾಗಿದೆ.

ಇದರ ಜತೆಗೆ ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಅವರನ್ನೂ ಸಚಿವ ಸ್ಥಾನದಿಂದ ಕೆಳಗಿಳಿಸಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿಯೂ ಆಗಿರುವ ಕಣೀಜ್‌ ಫಾತಿಮಾ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ, ರಿಜ್ವಾನ್‌ ಅರ್ಷದ್‌ ಈಗಾಗಲೇ ದೆಹಲಿಯಲ್ಲಿ ಪ್ರಭಾವಿ ಖಾತೆ ಪಡೆಯಲು ಪ್ರಯತ್ನ ನಡೆಸುತ್ತಿರುವುದರಿಂದ ಅವರನ್ನು ಬದಲಿಸುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಮೂಲಗಳು ಹೇಳಿವೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಡಿ.ಕೆ. ಶಿವಕುಮಾರ್‌ ಶುಕ್ರವಾರ ಸಂಜೆ ದೆಹಲಿಯಲ್ಲಿರುವ ಕರ್ನಾಟಕ ಸರ್ಕಾರದ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರನ್ನು ಭೇಟಿಯಾಗಿದ್ದರು. ವಿಧಾನಸಭೆಯಲ್ಲಿ ಹಂಗಾಮಿ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸುವಂತೆ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಸಂಪುಟ ವಿಸ್ತರಣೆಯ ಬಳಿಕ ಖಾತೆ ಹಂಚಿಕೆ ವಿಳಂಬವಾಗಿರುವುದು ಹಾಗೂ ಸಚಿವ ಸ್ಥಾನಕ್ಕಾಗಿ ಪಕ್ಷದೊಳಗೆ ಕೇಳಿಬರುತ್ತಿರುವ ಅಸಮಾಧಾನವು ಕಾಂಗ್ರೆಸ್‌ ಸರ್ಕಾರಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಹೈಕಮಾಂಡ್‌ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಡಿ.ಕೆ. ಶಿವಕುಮಾರ್‌ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com