

ಬೆಂಗಳೂರು: ವೈವಾಹಿಕ ಹೊಂದಾಣಿಕೆಯ ಕೊರತೆ, ದಾಂಪತ್ಯ ಕಲಹ ಅಥವಾ ವಿವಾಹ ಸಂಬಂಧದ ಅನೈಕ್ಯತೆಯನ್ನು ಕ್ರೌರ್ಯದ ಆರೋಪದಡಿ ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸಲು ಕ್ರಿಮಿನಲ್ ಕಾನೂನನ್ನು ಬಳಸಲು ಅವಕಾಶ ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಮೈಸೂರಿನ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರರು ಹಾಗೂ ದೂರುದಾರ ದಂಪತಿ ಇಬ್ಬರೂ ಪೊಲೀಸ್ ಅಧಿಕಾರಿಗಳಾಗಿದ್ದು, 2023ರಲ್ಲಿ ವಿವಾಹವಾಗಿದ್ದರು. ವಿವಾಹವಾದ ನಾಲ್ಕು ತಿಂಗಳೊಳಗೇ ಪತ್ನಿ ದೂರು ದಾಖಲಿಸಿ, ತಮ್ಮ ಮಧ್ಯೆ ಹೊಂದಾಣಿಕೆ ಬರುತ್ತಿಲ್ಲ ಎಂದು ಆರೋಪಿಸಿದ್ದರು.
ಪೊಲೀಸರು ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 498ಎ, 504 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಪಟ್ಟಿ ಸಲ್ಲಿಸಿದ್ದರು.
ವಿವಾಹ ಸಂಬಂಧ ಪೂರ್ಣಗೊಳ್ಳದಿರುವುದನ್ನು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯದ ಅಂಶವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದರು. ಇತರ ಆರೋಪಗಳಿಗೆ ಸಂಬಂಧಿಸಿದಂತೆ, ದೂರುದಾರರು ಕೆಲವು ಹಲ್ಲೆಗಳ ಬಗ್ಗೆ ಅಸ್ಪಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ಇದಕ್ಕೆ ಪ್ರತಿಯಾಗಿ, ಆರೋಪಪಟ್ಟಿಯ ಸಾರಾಂಶದಲ್ಲೇ ಅಪರಾಧಗಳು ಸಾಬೀತಾಗುವ ಅಂಶಗಳಿವೆ ಎಂದು ದೂರುದಾರ ಪತ್ನಿ ವಾದಿಸಿದರು. ಅರ್ಜಿದಾರರು ತಮ್ಮನ್ನು ವಿವಾಹವಾದ ಕ್ರಮವೇ ಕ್ರೌರ್ಯವಾಗುತ್ತದೆ. ಏಕೆಂದರೆ ಅವರು ದಾಂಪತ್ಯ ಸಂಬಂಧ ಹೊಂದದೆ, ನಾವು ಕೇವಲ ಸ್ನೇಹಿತರಾಗಿರೋಣ ಎಂದು ಹೇಳುತ್ತಿದ್ದರು ಎಂದು ಆರೋಪಿಸಿದರು. ಅರ್ಜಿದಾರರು ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದೂ ದೂರುದಾರರು ಆರೋಪಿಸಿದ್ದರು.
ದಾಖಲೆಗಳಲ್ಲಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಅಲ್ಪಾವಧಿಯ ದಾಂಪತ್ಯ ಜೀವನದ ಅವಧಿಯಲ್ಲಿ ಪತಿ ವೈವಾಹಿಕ ಸಂಬಂಧ ಹೊಂದಿಲ್ಲ ಎಂಬ ಒಂದೇ ಆರೋಪದ ಮೇಲೆ ಇಡೀ ಪ್ರಾಸಿಕ್ಯೂಷನ್ ಪ್ರಕರಣವನ್ನು ಕಟ್ಟಲಾಗಿದೆ ಎಂದರು.
ವೈವಾಹಿಕ ಹೊಂದಾಣಿಕೆಯ ಕೊರತೆ, ದಾಂಪತ್ಯ ಕಲಹ ಅಥವಾ ವಿವಾಹ ಸಂಬಂಧದ ಅನೈಕ್ಯತೆಯನ್ನು ಕಾನೂನುಬದ್ಧ ಆಧಾರವಿಲ್ಲದ ಸೃಷ್ಟಿತ ಆರೋಪಗಳನ್ನು ಸೇರಿಸುವ ಸರಳ ತಂತ್ರದ ಮೂಲಕ ಕ್ರೌರ್ಯದ ಪ್ರಕರಣವಾಗಿ ಪರಿವರ್ತಿಸಲು ಕ್ರಿಮಿನಲ್ ಕಾನೂನನ್ನು ಬಳಸಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.
ಪ್ರಕರಣ ದಾಖಲಿಸಿರುವುದರಿಂದ ಅರ್ಜಿದಾರರ ವಿರುದ್ಧ ಇಲಾಖಾ ವಿಚಾರಣೆಯೂ ಆರಂಭವಾಗಿರುವುದನ್ನು ನ್ಯಾಯಾಲಯ ಗಮನಿಸಿತು.
ಹೀಗಾಗಿ, ಆಧಾರರಹಿತವಾದ ಈ ಪ್ರಾಸಿಕ್ಯೂಷನ್‌ನ ಪರಿಣಾಮಗಳು ಕ್ರಿಮಿನಲ್ ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿ ಸಾಗುತ್ತವೆ. ಅರ್ಜಿದಾರರು ಎರಡು ರೀತಿಯ ದಾಳಿಯನ್ನು ಎದುರಿಸಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ. ಮೊದಲನೆಯದು, ಕ್ರಿಮಿನಲ್ ಪ್ರಕ್ರಿಯೆಯ ದುರುಪಯೋಗ; ಎರಡನೆಯದು, ಕ್ರಿಮಿನಲ್ ಪ್ರಕರಣ ಬಾಕಿ ಇರುವುದರಿಂದ ಉಂಟಾಗುವ ಕಳಂಕ ಮತ್ತು ಸೇವಾ ವಲಯದ ಪ್ರತಿಕೂಲ ಪರಿಣಾಮಗಳು ಎಂದು ನ್ಯಾಯಾಲಯ ಹೇಳಿತು.