

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳುವ ರೈತರಿಗೆ ಎಕರೆಗೆ 3 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿರುವ ಬೆನ್ನಲ್ಲೇ, ರಾಜ್ಯದ ಇತರೆ ಭಾಗಗಳ ರೈತರು ಭವಿಷ್ಯದ ಎಲ್ಲ ಮೂಲಸೌಕರ್ಯ ಯೋಜನೆಗಳಿಗಾಗಿ ಭೂಸ್ವಾಧೀನ ಮಾಡುವಾಗಲೂ ಇದೇ ಮಾನದಂಡವನ್ನು ಅನುಸರಿಸಬೇಕೆಂದು ಆಗ್ರಹಿಸಿದ್ದಾರೆ.
ಆದರೆ, ಭೂಸ್ವಾಧೀನಕ್ಕೆ ನೀಡುವ ಪರಿಹಾರವು ಭೂಮಿಯ ಸ್ಥಳ, ಅಭಿವೃದ್ಧಿ ಯೋಜನೆಯ ಅನುಷ್ಠಾನದ “ತುರ್ತು ಅಗತ್ಯ” ಸೇರಿದಂತೆ ವಿವಿಧ ಮಾನದಂಡಗಳನ್ನು ಅವಲಂಬಿಸಿರುತ್ತದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭಾನುವಾರ ಸೋಷಿಯಲ್ ಮೀಡಿಯಾದಲ್ಲಿ, ಹಿಂದಿನ ಸರ್ಕಾರ ಎಕರೆಗೆ 25 ಲಕ್ಷ ರೂಪಾಯಿ ಪರಿಹಾರ ನೀಡಲು ಮುಂದಾಗಿತ್ತು. ಆದರೆ ನಮ್ಮ ಸರ್ಕಾರ ಎಕರೆಗೆ 3 ಕೋಟಿ ರೂಪಾಯಿ ನೀಡಲು ನಿರ್ಧರಿಸಿದೆ. ಈ ಪರಿಹಾರಕ್ಕೆ ಒಪ್ಪದವರಿಗೆ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಶೇ.50ರಷ್ಟು ಪಾಲು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಆದರೆ, ಪ್ರಸ್ತಾವಿತ ಎಐ ಸಿಟಿ ಯೋಜನೆಗಾಗಿ ಬಿಡದಿಯ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರದಿಂದ ರೈತರು ಅಸಮಾಧಾನಗೊಂಡಿದ್ದಾರೆ.
ರೈತ ಮುಖಂಡ ಕುರುಬೂರು ಶಾಂತಕುಮಾರ್, ಮೂಲಸೌಕರ್ಯ ಯೋಜನೆಗಳಿಗಾಗಿ ಫಲವತ್ತಾದ ಅಥವಾ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ರಾಜ್ಯ ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ, ಇದೀಗ ಬಿಡದಿಯ ಫಲವತ್ತಾದ ಕೃಷಿ ಭೂಮಿಯಲ್ಲಿ ಟೌನ್‌ಶಿಪ್ ಯೋಜನೆ ಜಾರಿಗೊಳಿಸುವ ಮೂಲಕ ಸರ್ಕಾರ ತನ್ನದೇ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಭವಿಷ್ಯದಲ್ಲಿ ರಾಜ್ಯದಾದ್ಯಂತ, ತುಮಕೂರು, ಆನೇಕಲ್, ಪಾವಗಡ ಮತ್ತು ಬಳ್ಳಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಮಾಡುವಾಗ ಬಿಡದಿ ಮಾದರಿಯ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಆದರೆ, ಕಂದಾಯ, ಕೈಗಾರಿಕೆ ಮತ್ತು ವಸತಿ ಇಲಾಖೆಯ ಅಧಿಕಾರಿಗಳು ರಾಜ್ಯದಾದ್ಯಂತ ಇದೇ ಮಾನದಂಡವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಿಡದಿ ವಿಚಾರದಲ್ಲಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಅಗತ್ಯ, ಬೆಂಗಳೂರಿಗೆ ಅದರ ಸಮೀಪತೆ ಹಾಗೂ ನಗರಕ್ಕೆ ದೊರೆಯುವ ಹಲವು ಪ್ರಯೋಜನಗಳನ್ನು ಪರಿಗಣಿಸಿ ಪರಿಹಾರದ ಮೊತ್ತ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಭೂಸ್ವಾಧೀನ ಪರಿಹಾರದ ಮೊತ್ತವನ್ನು 1984ರ ಭೂಸ್ವಾಧೀನ ಕಾಯ್ದೆ ಆಧರಿಸಿ ಲೆಕ್ಕ ಹಾಕಲಾಗುತ್ತಿತ್ತು. ಇದೀಗ 2013ರ ಭೂಸ್ವಾಧೀನ ಕಾಯ್ದೆ ಅನುಸರಿಸಲಾಗುತ್ತಿದೆ.
2013ರ ಕಾಯ್ದೆಯಡಿ ಹೊರ ವರ್ತುಲ ರಸ್ತೆ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಅವರ ಭೂಮಿಯ ಮಾರ್ಗಸೂಚಿ ಮೌಲ್ಯದ ಮೂರು ಪಟ್ಟು ಪರಿಹಾರ ನೀಡಲಾಗಿತ್ತು. ಆದರೆ ಬಿಡದಿ ವಿಚಾರದಲ್ಲಿ ಇದಕ್ಕೆ ಹೆಚ್ಚುವರಿಯಾಗಿ ‘ಸಮ್ಮತಿ ಪರಿಹಾರ’ (Consent Award) ಎಂಬ ಅಂಶವನ್ನು ಸೇರಿಸಲಾಗಿದೆ.
ಇದರಡಿ ಎರಡೂ ಪಕ್ಷಗಳು ತಮಗೆ ಬೇಕಾದ ಪರಿಹಾರದ ಮೊತ್ತವನ್ನು ಪ್ರಸ್ತಾಪಿಸುತ್ತವೆ. ಬಳಿಕ ಎರಡೂ ಕಡೆಯ ಒಪ್ಪಿಗೆಯ ಮೇರೆಗೆ ಅಂತಿಮ ಮೊತ್ತ ನಿಗದಿಪಡಿಸಲಾಗುತ್ತದೆ.ಬಿಡದಿ ಬೆಂಗಳೂರಿಗೆ ಪ್ರಮುಖ ಯೋಜನೆಯಾಗಿರುವುದರಿಂದ ಈ ಪರಿಹಾರ ನೀಡಲಾಗುತ್ತಿದೆ. ಇದೇ ರೀತಿಯ ಪರಿಹಾರವನ್ನು ಮೇಕೆದಾಟು ಮತ್ತು ಎರಡನೇ ವಿಮಾನ ನಿಲ್ದಾಣ ಯೋಜನೆಗಳಿಗೂ ನೀಡಬಹುದು. ಆದರೆ, ಅದು ಯೋಜನೆ ಅನುಷ್ಠಾನಗೊಳಿಸುವ ಸಂಸ್ಥೆ ಹಾಗೂ ಅಂತಿಮ ಸರ್ಕಾರದ ಆದೇಶವನ್ನೂ ಅವಲಂಬಿಸಿರುತ್ತದೆ ಎಂದು ಅಧಿಕಾರಿ ವಿವರಿಸಿದರು.
ಇತರ ಜಿಲ್ಲೆಗಳಲ್ಲಿ ಇದೇ ರೀತಿಯ ಪರಿಹಾರ ನೀಡುವುದು ಕಷ್ಟ. ಏಕೆಂದರೆ ಅಲ್ಲಿನ ಭೂಮಿಯ ಮೌಲ್ಯ ಹಾಗೂ ಮಾರ್ಗಸೂಚಿ ಮೌಲ್ಯ ಹೆಚ್ಚಿಲ್ಲ. ರೈತರು ಎಷ್ಟು ಪರಿಹಾರ ಕೇಳುತ್ತಾರೆ ಮತ್ತು ಸರ್ಕಾರ ಎಷ್ಟು ಮೊತ್ತಕ್ಕೆ ಒಪ್ಪುತ್ತದೆ ಎಂಬುದೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಬಿಡದಿ ರೈತರು ಯಾವುದೇ ಮೊತ್ತವನ್ನು ಪ್ರಸ್ತಾಪಿಸಿಲ್ಲ ಹಾಗೂ ತಮ್ಮ ಭೂಮಿಯನ್ನು ಹಸ್ತಾಂತರಿಸಲು ಆಸಕ್ತಿ ಹೊಂದಿಲ್ಲ ಎಂದು ತಿಳಿಸಿದ್ದರೂ, ಸರ್ಕಾರ ಎಕರೆಗೆ 3 ಕೋಟಿ ಪರಿಹಾರ ಘೋಷಿಸಿದೆ ಎಂದು ಶಾಂತಕುಮಾರ್ ಹೇಳಿದರು.