ವಿಧಾನಸೌಧ-ವಿಕಾಸಸೌಧ, ಆರೋಗ್ಯಸೌಧದಲ್ಲೇ ಇಲ್ಲ ಆರೋಗ್ಯ! ಕ್ಯಾಂಟೀನ್‌ಗಳಲ್ಲಿ ಜಿರಳೆ, ಅವಧಿ ಮೀರಿದ ಆಹಾರ ಪತ್ತೆ; ಹೊರಗೆ ಊಟ ಮಾಡುವ ಮುನ್ನ ಇದನ್ನೊಮ್ಮೆ ನೋಡಿ..!

ಇದಲ್ಲದೆ, 300 ಕೆ.ಜಿ. ಪ್ಯಾಕ್‌ ಮಾಡಲಾದ ಅಕ್ಕಿ, 20 ಕೆ.ಜಿ. ಡ್ರೈಫ್ರೂಟ್ಸ್ ಹಾಗೂ 15 ಕೆ.ಜಿ. ಮಸಾಲೆ ಪದಾರ್ಥಗಳಲ್ಲಿ ತಪ್ಪಾದ ಲೇಬಲಿಂಗ್‌ ಕಂಡುಬಂದಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FDA) ಬೆಂಗಳೂರಿನಲ್ಲಿ ತನ್ನ ಆಹಾರ ಸುರಕ್ಷತಾ ತಪಾಸಣೆಯನ್ನು ತೀವ್ರಗೊಳಿಸಿದೆ. ಈ ಬಾರಿ ಖಾಸಗಿ ಐಷಾರಾಮಿ ಹೋಟೆಲ್‌ಗಳು, ಪಬ್‌ಗಳು ಹಾಗೂ ಕ್ವಿಕ್-ಕಾಮರ್ಸ್ ಗೋದಾಮುಗಳಷ್ಟೇ ಅಲ್ಲದೆ, ಪ್ರಮುಖ ಸರ್ಕಾರಿ ಕಚೇರಿಗಳ ಕ್ಯಾಂಟೀನ್‌ಗಳ ಮೇಲೂ ದಾಳಿ ನಡೆಸಿ, ಅವಧಿ ಮುಗಿದ ಆಹಾರ, ಜಿರಳೆಗಳು ಮತ್ತು ತೀವ್ರ ಸ್ವಚ್ಛತೆಯ ಕೊರತೆಯನ್ನು ಪತ್ತೆಹಚ್ಚಿದೆ.

ಆಗಸ್ಟ್‌ 11 ಮತ್ತು 12ರಂದು ನಡೆದ ವಿಶೇಷ ಕಾರ್ಯಾಚರಣೆಗಳಲ್ಲಿ ತಪ್ಪು ಲೇಬಲಿಂಗ್‌, ಪರವಾನಗಿ ಸಮಸ್ಯೆ, ಅವಧಿ ಮೀರಿದ ಆಹಾರ ಹಾಗೂ ಅಸ್ವಚ್ಛ ಪರಿಸ್ಥಿತಿಗಳು ಪತ್ತೆಯಾಗಿವೆ.

ಆಗಸ್ಟ್‌ 11ರಂದು ಬೆಂಗಳೂರು ನಗರ ಜಿಲ್ಲೆಯ ಸಕಲವಾರದಲ್ಲಿರುವ ಜೊಮ್ಯಾಟೋದ ಹೈಪರ್‌ಪ್ಯೂರ್‌ ಗೋದಾಮಿಗೆ ಅಧಿಕಾರಿಗಳು ತಪಾಸಣೆ ನಡೆಸಿದರು. ಹಲವು ಹೋಟೆಲ್‌ಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಈ ಘಟಕದಲ್ಲಿ ತಯಾರಕರ ಎಫ್‌ಎಸ್‌ಎಸ್‌ಎಐ ಪರವಾನಗಿ ಸಂಖ್ಯೆಯಿಲ್ಲದ 146 ಕೆ.ಜಿ. ಕೋಳಿ ಮಾಂಸ ಪತ್ತೆಯಾಗಿದೆ. ಅಲ್ಲದೆ, ಎಫ್‌ಎಸ್‌ಎಸ್‌ಎಐ ಪರವಾನಗಿ ಜಾರಿಯಲ್ಲಿರದ ತಯಾರಕರಿಗೆ ಸಂಬಂಧಿಸಿದ 40 ಕೆ.ಜಿ. ಬೆಳ್ಳುಳ್ಳಿ ಕೂಡ ಪತ್ತೆಯಾಗಿದೆ.

ಇದಲ್ಲದೆ, 300 ಕೆ.ಜಿ. ಪ್ಯಾಕ್‌ ಮಾಡಲಾದ ಅಕ್ಕಿ, 20 ಕೆ.ಜಿ. ಡ್ರೈಫ್ರೂಟ್ಸ್ ಹಾಗೂ 15 ಕೆ.ಜಿ. ಮಸಾಲೆ ಪದಾರ್ಥಗಳಲ್ಲಿ ತಪ್ಪಾದ ಲೇಬಲಿಂಗ್‌ ಕಂಡುಬಂದಿದೆ. ಶೈತ್ಯೀಕರಣದಲ್ಲಿ ಇಡಬೇಕು ಎಂದು ಲೇಬಲ್‌ನಲ್ಲಿ ಸೂಚಿಸಿದ್ದರೂ 10 ಕೆ.ಜಿ. ಆಮದು ಮಾಡಿದ ಮೂಲಂಗಿ ಉಪ್ಪಿನಕಾಯಿಯನ್ನು ಶೈತ್ಯೀಕರಣವಿಲ್ಲದೆ ಸಂಗ್ರಹಿಸಿರುವುದು ಪತ್ತೆಯಾಗಿದೆ.

ಹೈಪರ್‌ಪ್ಯೂರ್‌ ಘಟಕದಿಂದ ಒಟ್ಟು 40 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ ಐದು ಕಾನೂನುಬದ್ಧ ಮಾದರಿಗಳು ಹಾಗೂ 35 ಸಮೀಕ್ಷಾ ಮಾದರಿಗಳಾಗಿವೆ. ಸಂಬಂಧಿತ ಘಟಕಕ್ಕೆ ನೋಟಿಸ್‌ ನೀಡಲಾಗಿದ್ದು, ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

File photo
ಐಷಾರಾಮಿ ರೆಸ್ಟೋರೆಂಟ್ ಗಳ ಅಧ್ವಾನ: UB ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ; ಕೊಳೆತ ಗೋಮಾಂಸ ಪತ್ತೆ! Video

ಸರ್ಕಾರಿ ಕಟ್ಟಡಗಳಲ್ಲೂ ಅವಧಿ ಮೀರಿದ ಆಹಾರ ಪತ್ತೆ

ಆಗಸ್ಟ್‌ 12ರಂದು ಆರೋಗ್ಯ ಸೌಧ, ವಿಧಾನಸೌಧ, ಶಾಸಕರ ಭವನ, ವಿಕಾಸಸೌಧ ಹಾಗೂ ಎಂ.ಎಸ್‌. ಕಟ್ಟಡದಲ್ಲಿರುವ ಹೋಟೆಲ್‌ ಮತ್ತು ಆಹಾರ ಮಳಿಗೆಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದರು.

ಆಹಾರದ ಗುಣಮಟ್ಟ, ಲೇಬಲಿಂಗ್‌, ಸಂಗ್ರಹಣೆ, ಸ್ವಚ್ಛತೆ ಮತ್ತು ಆಹಾರ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಲಾಯಿತು.

ಆವರಣದಲ್ಲಿರುವ ಕ್ಯಾಂಟೀನ್‌ವೊಂದರಲ್ಲಿ 500 ಗ್ರಾಂ ಅವಧಿ ಮೀರಿದ ರವಾ ಹಾಗೂ 500 ಗ್ರಾಂ ಅವಧಿ ಮೀರಿದ ಕೊಕೊಕಾಂಟ್‌ ಪೌಡರ್‌ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕ್ಯಾಂಟೀನ್‌ನಲ್ಲಿ ಅಸ್ವಚ್ಛ ಪರಿಸ್ಥಿತಿಯೂ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಸಲಹಾ ನೋಟಿಸ್‌ ನೀಡಲಾಗಿದ್ದು, ಪ್ರಕರಣವನ್ನು ತೀರ್ಪು ನೀಡುವ ಅಧಿಕಾರಿಯ ಮುಂದೆ ಕಾನೂನು ಕ್ರಮಕ್ಕಾಗಿ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂದಿನಿ ಪಾರ್ಲರ್‌ವೊಂದರಲ್ಲಿ ಲೇಬಲಿಂಗ್‌ ನಿಯಮಗಳ ಉಲ್ಲಂಘನೆ ಕಂಡುಬಂದಿದ್ದು, ಸಲಹಾ ನೋಟಿಸ್‌ ನೀಡಲಾಗಿದೆ. ಆವರಣದಲ್ಲಿರುವ ನಾಲ್ಕು ಹೋಟೆಲ್‌ಗಳಲ್ಲೂ ವಿವಿಧ ಲೋಪಗಳು ಪತ್ತೆಯಾಗಿದ್ದು, ಅವುಗಳಿಗೂ ನೋಟಿಸ್‌ ನೀಡಲಾಗಿದೆ.

ಜಿರಳೆ ಪತ್ತೆ; ಮತ್ತೊಂದು ಹೋಟೆಲ್‌ ಬಂದ್‌

ಈ ನಡುವೆ ಮಲ್ಲಿಗೆ ಹೋಟೆಲ್‌ನಲ್ಲಿ ಅಸ್ವಚ್ಛ ಪರಿಸ್ಥಿತಿಯೊಂದಿಗೆ ಜಿರಳೆಗಳು ಪತ್ತೆಯಾಗಿವೆ. ಹೋಟೆಲ್‌ನಲ್ಲಿ ಕೀಟ ನಿಯಂತ್ರಣ ಕ್ರಮಗಳನ್ನೂ ಕೈಗೊಂಡಿರಲಿಲ್ಲ. ಇದರಿಂದ ಆಹಾರ ಸ್ವಚ್ಛತೆ ಮತ್ತು ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಎದುರಾಗಿವೆ.

ಮತ್ತೊಂದು ಹೋಟೆಲ್‌ನಲ್ಲೂ ಅಸ್ವಚ್ಛ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಸಲಹಾ ನೋಟಿಸ್‌ ನೀಡಲಾಗಿದೆ. ಎಂ.ಎಸ್‌. ಕಟ್ಟಡದಲ್ಲಿರುವ ಹೋಟೆಲ್‌ವೊಂದರಲ್ಲಿ ಅಸ್ವಚ್ಛ ಪರಿಸ್ಥಿತಿಯಲ್ಲಿ ಆಹಾರ ವಹಿವಾಟು ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹೋಟೆಲ್‌ನ್ನು ಬಂದ್‌ ಮಾಡಲಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ಅನ್ವಯವಾಗುವ ನಿಯಮಗಳ ಅಡಿಯಲ್ಲಿ ಸಂಬಂಧಿತ ಆಹಾರ ವಹಿವಾಟು ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಆಹಾರ ವಹಿವಾಟುದಾರರು ಆಹಾರದ ಗುಣಮಟ್ಟ, ಸುರಕ್ಷತೆ, ಸ್ವಚ್ಛತೆ, ಸಂಗ್ರಹಣೆ, ಲೇಬಲಿಂಗ್‌ ಮತ್ತು ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com