ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್‌ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ; ಸಚಿವ ರಾಮಲಿಂಗಾರೆಡ್ಡಿ

ಮುಖ್ಯಮಂತ್ರಿಗಳು ಕಾನೂನು ತಜ್ಞರೊಂದಿಗೂ ಸಮಾಲೋಚನೆ ನಡೆಸಿದ್ದಾರೆ. ಮಂಗಳವಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗಳು ನಡೆದಿವೆ.
Ramalinga reddy
ರಾಮಲಿಂಗಾರೆಡ್ಡಿ
Updated on

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ನಿರ್ದೇಶನದ ಕುರಿತು ಮುಂದಿನ ಕ್ರಮವನ್ನು ಸುಪ್ರೀಂ ಕೋರ್ಟ್‌ನ ಮುಂದಿನ ವಿಚಾರಣೆಯ ಫಲಿತಾಂಶ ಆಧರಿಸಿ ತೆಗೆದುಕೊಳ್ಳಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದಾಗಿ ಹೇಳಿದರು.

“ಮುಖ್ಯಮಂತ್ರಿಗಳು ಕಾನೂನು ತಜ್ಞರೊಂದಿಗೂ ಸಮಾಲೋಚನೆ ನಡೆಸಿದ್ದಾರೆ. ಮಂಗಳವಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗಳು ನಡೆದಿವೆ. ಎರಡೂ ಪ್ರಾಧಿಕಾರಗಳು ಕರ್ನಾಟಕವು 12,000 ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡುವಂತೆ ಸೂಚಿಸಿವೆ.

ಈ ನಡುವೆ ತಮಿಳುನಾಡು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಹೀಗಾಗಿ ನ್ಯಾಯಾಲಯದ ಆದೇಶವನ್ನು ಆಧರಿಸಿ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಹೇಳಿದರು.

12 ಸಾವಿರ ಕ್ಯುಸೆಕ್‌ ನೀರು ಬಿಡುವುದು ರಾಜ್ಯಕ್ಕೆ ಅನುಕೂಲಕರವಲ್ಲ

ಸದ್ಯ ಕರ್ನಾಟಕದಲ್ಲಿ ಸುಮಾರು 76 ಟಿಎಂಸಿ ಅಡಿ ನೀರು ಲಭ್ಯವಿದೆ. ಆದರೆ 12,000 ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಹರಿಸುವುದು ರಾಜ್ಯದ ಪಾಲಿಗೆ ಅನುಕೂಲಕರವಲ್ಲ ಎಂದು ಹೇಳಿದರು.

ಮತ್ತೊಂದೆಡೆ ತಮಿಳುನಾಡಿನ ಭವಾನಿ ಮತ್ತು ಮೆಟ್ಟೂರು ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ತಮಿಳುನಾಡಿನಲ್ಲಿ ಅಂತರ್ಜಲ ಲಭ್ಯತೆಯೂ ಉತ್ತಮವಾಗಿದೆ. ಶೀಘ್ರದಲ್ಲೇ ಈಶಾನ್ಯ ಮುಂಗಾರು ಆರಂಭವಾಗಲಿದೆ. ಜುಲೈ 29ರಿಂದಲೇ ಸುಮಾರು 10 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿದು ಹೋಗಿದೆ” ಎಂದು ವಿವರಿಸಿದರು.

Ramalinga reddy
ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲ: CM ಡಿಕೆ.ಶಿವಕುಮಾರ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಕುಮಾರಸ್ವಾಮಿ ಟೀಕೆಗೆ ರಾಮಲಿಂಗಾರೆಡ್ಡಿ ತಿರುಗೇಟು

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಕರ್ನಾಟಕವು ಸಂಬಂಧಿಸಿದ ಪ್ರಾಧಿಕಾರಗಳ ಮುಂದೆ ತನ್ನ ವಾದವನ್ನು ಬಲವಾಗಿ ಮಂಡಿಸಿದೆ ಎಂದು ಹೇಳಿದರು.

ಕುಮಾರಸ್ವಾಮಿಗೆ ಈ ವಿಚಾರ ಚರ್ಚಿಸಬೇಕಿದ್ದರೆ ಬರಲಿ. ಅವರು ಯಾರನ್ನಾದರೂ ಕಳುಹಿಸಬಹುದು. ಅವರೊಂದಿಗೆ ಈ ವಿಷಯ ಚರ್ಚಿಸಲು ನಾವು ಸಿದ್ಧರಿದ್ದೇವೆ, ಕರ್ನಾಟಕದ ರೈತರ ಹಿತಾಸಕ್ತಿಯನ್ನು ರಾಜ್ಯ ಸರ್ಕಾರ ಕಾಪಾಡಿದೆ ಎಂದು ತಿಳಿಸಿದರು.

ಯಾರಾದರೂ ರಾಜಕೀಯ ಹೇಳಿಕೆಗಳನ್ನು ನೀಡಬಹುದು. ಅದಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ. ಕೇಂದ್ರ ಸಚಿವರಾಗಿರುವ ಅವರು ಕೇಂದ್ರದಲ್ಲಿ ಕರ್ನಾಟಕದ ನೀರಾವರಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬಹುದಿತ್ತು ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com