

ಬೆಂಗಳೂರು: ಸ್ಯಾಂಡಲ್‌ವುಡ್ ನ ಖ್ಯಾತ ನಟಿಯೊಬ್ಬರ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯುವಕನನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅಲ್ಲದೆ, ಇತ್ತ ಆರೋಪಿಯೂ ಪ್ರತಿದೂರು ದಾಖಲಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಘವೇಂದ್ರ ಎಂದು ಗುರುತಿಸಲಾಗಿದ್ದು, ದೂರುದಾರ ಯುವತಿ ಹಾಗೂ ಆರೋಪಿ ರಾಘವೇಂದ್ರ ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಥಳದಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು, ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಮದುವೆಯಾಗುವುದಾಗಿ ನಂಬಿಸಿ ರಾಘವೇಂದ್ರ ತನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ದೂರಿನಲ್ಲೇನಿದೆ?
ಬಂಧಿತ ರಾಘವೇಂದ್ರ ಹಾಗೂ ನಟಿಯ ಸಹೋದರಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪರಿಚಯವಾಗಿ, ಬಳಿಕ ಸ್ನೇಹ ಬೆಳೆದಿತ್ತು. ಮದುವೆಯಾಗುವುದಾಗಿ ನಂಬಿಸಿ ತನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಅಲ್ಲದೆ, ನಟಿಯ ಸಹೋದರಿಯ ಕ್ರೆಡಿಟ್ ಕಾರ್ಡ್ ಬಳಸಿ ಸಾಲವನ್ನೂ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿದೆ.
ಹಣಕಾಸಿನ ತೊಂದರೆ ಎದುರಾದಾಗ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ವಿಚಾರಿಸಿದಾಗ ರಾಘವೇಂದ್ರನಿಗೆ ಈಗಾಗಲೇ ಮದುವೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನಿಸಿದಾಗ, ಆಕೆಯ ಖಾಸಗಿ ಫೋಟೋಗಳನ್ನು ತೋರಿಸಿ, "ನಾನು ಹೇಳಿದಂತೆ ಕೇಳಬೇಕು, ಇಲ್ಲದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ" ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಕುರಿತು ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಪೊಲೀಸರು ರಾಘವೇಂದ್ರನನ್ನು ಕರೆಸಿ ಖಾಸಗಿ ಫೋಟೋಗಳನ್ನು ಡಿಲೀಟ್ ಮಾಡಿಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ, ಕೆಲ ದಿನಗಳ ನಂತರ ಕೈ ಕೊಯ್ದುಕೊಂಡ ಫೋಟೋ ಹಾಗೂ ಖಾಸಗಿ ಫೋಟೋಗಳನ್ನು ಯುವತಿಗೆ ಕಳುಹಿಸಿ, "ನಾನು ಹೇಳಿದ ಜಾಗಕ್ಕೆ ಬರಬೇಕು" ಎಂದು ಮತ್ತೆ ಬೆದರಿಕೆ ಒಡ್ಡಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ರಾಘವೇಂದ್ರನಿಂದ ಪ್ರತಿ ದೂರು
ಆರೋಪಿ ರಾಘವೇಂದ್ರ ಸಹ ನಟಿಯ ಸಹೋದರಿಯ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎನ್‌ಸಿಆರ್(NCR) ದಾಖಲಾಗಿದೆ. ನಟಿ ಸಹೋದರಿ ತನಗೆ ಹಾಗೂ ತನ್ನ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ರಾಘವೇಂದ್ರ ಆರೋಪಿಸಿದ್ದಾರೆ. ಈ ಸಂಬಂಧ ನೋಟಿಸ್ ನೀಡಿದ್ದರೂ ನಟಿಯ ಸಹೋದರಿ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.
ತಾವು ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಆದರೆ ಇತ್ತೀಚೆಗೆ ಆಕೆ ಇನ್ನೊಬ್ಬನನ್ನು ಪ್ರೀತಿಸುತ್ತಿದ್ದು, ಈ ವಿಷಯ ತನಗೆ ತಿಳಿದು ಆಕೆಯಿಂದ ದೂರವಾಗಿದ್ದೆ. ಇದೇ ಕಾರಣಕ್ಕೆ ತನ್ನ ವಿರುದ್ಧ ಸುಳ್ಳು ರೇಪ್ ಕೇಸ್ ನೀಡಿದ್ದಾಳೆ ಎಂದು ರಾಘವೇಂದ್ರ ಆರೋಪಿಸಿದ್ದಾನೆ.
ಪ್ರಸ್ತುತ ಚಂದ್ರಲೇಔಟ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.