

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಗೆ ಭಾರಿ ಉತ್ತೇಜನ ಸಿಕ್ಕಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ (SLSWCC) ಸಭೆಯು ಒಟ್ಟು 6,252.86 ಕೋಟಿ ರೂ. ಮೌಲ್ಯದ 83 ಕೈಗಾರಿಕಾ ಯೋಜನೆಗಳಿಗೆ ಪ್ರಮುಖ ಅನುಮೋದನೆ ನೀಡಿದೆ. ಈ ಮಹತ್ತರ ನಿರ್ಧಾರದಿಂದಾಗಿ ರಾಜ್ಯಾದ್ಯಂತ 30,054 ಕ್ಕೂ ಹೆಚ್ಚು ಜನರಿಗೆ ಹೊಸದಾಗಿ ಉದ್ಯೋಗಾವಕಾಶಗಳು ಲಭಿಸಲಿವೆ.
ಅನುಮೋದನೆ ಪಡೆದ ಯೋಜನೆಗಳ ಪೈಕಿ 69 ಯೋಜನೆಗಳು ಬೆಂಗಳೂರಿನ ಹೊರಭಾಗದಲ್ಲಿ ಸ್ಥಾಪನೆಯಾಗಲಿವೆ. ಈ ಯೋಜನೆಗಳಿಂದ ರಾಜ್ಯಾದ್ಯಂತ 30,054ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ. ಪಾಟೀಲ್ ಅವರು, ರೂ.50 ಕೋಟಿಗೂ ಅಧಿಕ ಹೂಡಿಕೆಯ 24 ಯೋಜನೆಗಳು ಒಟ್ಟು ರೂ.4,702.99 ಕೋಟಿ ಹೂಡಿಕೆ ತರಲಿದ್ದು, ಸುಮಾರು 25,170 ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಹೇಳಿದ್ದಾರೆ.
ಇನ್ನು ರೂ.15 ಕೋಟಿಯಿಂದ ರೂ.50 ಕೋಟಿವರೆಗಿನ ಹೂಡಿಕೆಯ 57 ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಇವುಗಳ ಮೂಲಕ ರೂ.1,291.87 ಕೋಟಿ ಹೂಡಿಕೆ ಬರಲಿದೆ. ಈ ಯೋಜನೆಗಳಿಂದ 4,884 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಅನುಮೋದನೆ ಪಡೆದ ಯೋಜನೆಗಳು ವಿವಿಧ ಕ್ಷೇತ್ರಗಳನ್ನು ಒಳಗೊಂಡಿವೆ. ಸಂಯೋಜಿತ ಕೈಗಾರಿಕಾ ಪಾರ್ಕ್‌ಗಳು, ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆ, ಆಹಾರ ಸಂಸ್ಕರಣೆ, ಮಾಹಿತಿ ತಂತ್ರಜ್ಞಾನ ಸೇವೆಗಳು ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಪ್ರಮುಖ ಹೂಡಿಕೆಗಳು ಬರಲಿವೆ.
ದೊಡ್ಡಬಳ್ಳಾಪುರದಲ್ಲಿ ರೂ.475 ಕೋಟಿ ಹೂಡಿಕೆ
ಅನುಮೋದನೆ ಪಡೆದ ಪ್ರಮುಖ ಯೋಜನೆಗಳಲ್ಲಿ ಬೆಂಗಳೂರಿನ ಜಸ್ವಿನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಯೋಜನೆಯೂ ಸೇರಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಂಯೋಜಿತ ಕೈಗಾರಿಕಾ ಪಾರ್ಕ್ ಮತ್ತು ಮಿಶ್ರ ಬಳಕೆಯ ಟೌನ್‌ಶಿಪ್ ಅಭಿವೃದ್ಧಿಪಡಿಸಲು ಸಂಸ್ಥೆ ರೂ.475 ಕೋಟಿ ಹೂಡಿಕೆ ಮಾಡಲಿದೆ. ಈ ಯೋಜನೆಯಿಂದ 12,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಅದೇ ರೀತಿ, ಜಂಪಾನಾ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗೋದಾಮು, ಸರಕು ಸಾಗಣೆ, ವಸತಿ ಹಾಗೂ ವಾಣಿಜ್ಯ ಸ್ಥಳಗಳನ್ನು ಒಳಗೊಂಡ ಸಂಯೋಜಿತ ಕೈಗಾರಿಕಾ ಪಾರ್ಕ್ ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ರೂ.465 ಕೋಟಿ ಹೂಡಿಕೆ ಮಾಡಲಿದ್ದು, ಸುಮಾರು 2,500 ಉದ್ಯೋಗಗಳು ಸೃಷ್ಟಿಯಾಗಲಿವೆ.