

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಸ್ತಾವಿಸಲಾಗಿರುವ ಐದು ಪೊಲೀಸ್ ಆಯುಕ್ತಾಲಯಗಳ ಕುರಿತ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಂಬಂಧಿಸಿದ ಮಹಿಳಾ ಪೊಲೀಸ್ ಪೇದೆ ಹಾಗೂ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡವರನ್ನು ಪೊಲೀಸ್ ಪೇದೆ ವನಿತಾ, ವಿಭಾಗದ ಅಧೀಕ್ಷಕ ಶಂಕರ್, ದ್ವಿತೀಯ ದರ್ಜೆ ಸಹಾಯಕ ಸುಹಾಸ್ ಹಾಗೂ ಪ್ರಥಮ ದರ್ಜೆ ಸಹಾಯಕ ಭವ್ಯ ಎಂದು ಗುರುತಿಸಲಾಗಿದೆ.
ಪೊಲೀಸ್ ಆಯುಕ್ತರ ಕಚೇರಿಯಿಂದ ಸಿದ್ಧಪಡಿಸಲಾಗಿದ್ದ ಪ್ರಸ್ತಾವನೆಯನ್ನು ಅನಧಿಕೃತವಾಗಿ ಹಂಚಿಕೆ ಮಾಡಿದ ಆರೋಪದ ಮೇಲೆ ಈ ನಾಲ್ವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐದು ಪೊಲೀಸ್ ಆಯುಕ್ತಾಲಯಗಳ ರಚನೆಗೆ ಸಂಬಂಧಿಸಿದ ಪ್ರಸ್ತಾವನೆಯ ಸಾಫ್ಟ್ ಕಾಪಿ ಮುಂದಿನ ಅಧಿಕೃತ ಸಂವಹನಕ್ಕಾಗಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರ (ಡಿಜಿ-ಐಜಿಪಿ) ಕಚೇರಿಗೆ ಕಳುಹಿಸುವ ಜವಾಬ್ದಾರಿ ಈ ನಾಲ್ವರ ಮೇಲಿತ್ತು ಎಂದು ಮೂಲಗಳು ಹೇಳಿವೆ.
ಆದರೆ, ಅವರಲ್ಲಿ ಒಬ್ಬರು ಪ್ರಸ್ತಾವನೆಯ ಸಾಫ್ಟ್ ಕಾಪಿಯನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಮೊಬೈಲ್‌ಗೆ ವರ್ಗಾಯಿಸಿಕೊಂಡಿದ್ದರು. ಬಳಿಕ ಅದನ್ನು ಇತರರಿಗೆ ಹಂಚಿಕೊಂಡಿದ್ದು, ಅವರು ಮತ್ತಷ್ಟು ಜನರಿಗೆ ಆ ಮಾಹಿತಿಯನ್ನು ರವಾನಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅಧಿಕೃತ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.