

ಬೆಂಗಳೂರು: ಸ್ವಾತಂತ್ರ್ಯ ದಿನದಂದು ವಿಜಯನಗರದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಕರ್ತವ್ಯದಿಂದ ವಿನಾಯಿತಿ ಕೋರಿದ ನಂತರ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರ ಬದಲಿಗೆ ರಾಜ್ಯ ಸರ್ಕಾರ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಆ ಜವಾಬ್ದಾರಿಯನ್ನು ವಹಿಸಿದೆ.
ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಖಾನ್, ಸಮಯದ ಅಭಾವವನ್ನು ಕಾರಣವಾಗಿ ನೀಡಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಕೂಡ ನಿರಾಕರಿಸಿದ್ದಾರೆ. ಧ್ವಜಾರೋಹಣ ಕರ್ತವ್ಯದಿಂದ ವಿನಾಯಿತಿ ಕೋರಿದ ಸಚಿವರ ಕ್ರಮವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದ್ದು, ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದೆ. ಈ ವಿಷಯವು ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.
ಸರ್ಕಾರ ಈ ವಿಷಯವನ್ನು ನಿರ್ವಹಿಸಿದ ರೀತಿಯನ್ನು "ಅಪಮಾನಕರ" ಎಂದು ಬಣ್ಣಿಸಿದ ಬಿಜೆಪಿ ಸದಸ್ಯರು ನಂತರ ಸದನದಿಂದ ಹೊರನಡೆದರು. ಈ ಎರಡೂ ಜವಾಬ್ದಾರಿಗಳಿಂದ ವಿನಾಯಿತಿ ಕೋರಿ ಜಮೀರ್ ಅಹ್ಮದ್ ಖಾನ್ ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು.
ಮುಂದಿನ ದಿನಗಳಲ್ಲಿ GBA ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ವಿಧಾನಸಭೆ ಉಪ ಚುನಾವಣೆ ಮತ್ತು ರಾಜ್ಯದಲ್ಲಿ ಪಕ್ಷ ಸಂಘಟನಾ ಚಟುವಟಿಕೆಗಳು ನಡೆಯಲಿವೆ. ಈ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವರ ಕರ್ತವ್ಯಗಳನ್ನು ನಿರ್ವಹಿಸಲು ನನಗೆ ಸಾಕಷ್ಟು ಸಮಯವಿರುವುದಿಲ್ಲ. ಹೀಗಾಗಿ ರಾಜ್ಯದ ಯಾವುದೇ ಜಿಲ್ಲೆಗೆ ನನ್ನನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸದಂತೆ ನಿಮ್ಮಲ್ಲಿ ಕೋರುತ್ತೇನೆ. ಅಲ್ಲದೇ 15.08.2026 ರಂದು ಸ್ವಾತಂತ್ರ್ಯ ದಿನದಂದು ವಿಜಯನಗರದಲ್ಲಿ ಧ್ವಜಾರೋಹಣ ಮಾಡುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿದೆ. ಅಲ್ಲಿಗೆ ಹಾಜರಾಗಲು ಸಾಧ್ಯವಾಗದ ಕಾರಣ, ಈ ಜವಾಬ್ದಾರಿಯಿಂದ ವಿನಾಯಿತಿಗೊಳಿಸುವಂತೆ ಕೋರುತ್ತೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಈ ಮೊದಲೇ ವಹಿಸಲಾಗಿತ್ತು. ಈಗಾಗಲೇ ಆ ವರದಿಯನ್ನು ಸಲ್ಲಿಸಿರುವುದಾಗಿ ಖಾನ್ ತಿಳಿಸಿದ್ದಾರೆ. ಅವರ ಪತ್ರದ ನಂತರ, ಸರ್ಕಾರವು ಪಟ್ಟಿಯನ್ನು ಪರಿಷ್ಕರಿಸಿ, ವಿಜಯನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಜವಾಬ್ದಾರಿಯನ್ನು ಬಸವಂತಪ್ಪ ಅವರಿಗೆ ವಹಿಸಿತು. ಖಾನ್ ಮತ್ತು ಬಸವಂತಪ್ಪ ಇಬ್ಬರೂ ಆಗಸ್ಟ್ 3 ರಂದು ಸಚಿವರಾಗಿ ಸಂಪುಟವನ್ನು ಸೇರಿದ್ದರು.
ವಸತಿ ಖಾತೆಯನ್ನು ಹೊಂದಿರುವ ಖಾನ್, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೂ ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನು ಹೊಂದಿದ್ದರು. ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಹಿರಿಯ ಬಿಜೆಪಿ ಶಾಸಕ ಸುನಿಲ್ ಕುಮಾರ್, ಧ್ವಜಾರೋಹಣದ ಕರ್ತವ್ಯದಿಂದ ವಿನಾಯಿತಿ ಕೋರಿ ಖಾನ್ ಬರೆದ ಪತ್ರವು ರಾಷ್ಟ್ರೀಯ ಹಬ್ಬದ ಬಗ್ಗೆ ಅವರಿಗಿರುವ ಗಂಭೀರತೆಯ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದರು. "ಒಬ್ಬ ಸಚಿವರು ರಾಷ್ಟ್ರೀಯ ಹಬ್ಬದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಅಂತಹ ಸಚಿವರು ಯಾಕೆ ಬೇಕು? ರಾಷ್ಟ್ರಧ್ವಜವನ್ನು ಹಾರಿಸಲು ಸಾಧ್ಯವಾಗದಷ್ಟು ಅವರು ಅಷ್ಟೊಂದು ದೊಡ್ಡವರೇ ಅಥವಾ ಅಷ್ಟೊಂದು ಬ್ಯುಸಿಯೇ?" ಎಂದು ಅವರು ಪ್ರಶ್ನಿಸಿದರು.
ಸಚಿವರ ನಡೆ ಸಮರ್ಥಿಸಿಕೊಂಡ ಡಿಸಿಎಂ ಪರಮೇಶ್ವರ್:
"ಸರ್ಕಾರವು ಸಚಿವರೊಬ್ಬರಿಂದ ಇಂತಹ ಪತ್ರವನ್ನು ಸ್ವೀಕರಿಸಿದ್ರಾ, ಇದೇನು? ಮುಖ್ಯಮಂತ್ರಿ ಅದನ್ನು ಸ್ವೀಕರಿಸಿ ಮತ್ತೊಬ್ಬ ಸಚಿವರಿಗೆ ಜವಾಬ್ದಾರಿ ನೀಡಿದ್ದಾರೆ. ರಾಷ್ಟ್ರಧ್ವಜ ಮತ್ತು ರಾಷ್ಟ್ರೀಯ ಆಚರಣೆಗೆ ಗೌರವವಿಲ್ಲವೇ? ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಸಚಿವರು ನಮಗೆ ಏಕೆ ಬೇಕು?" ಎಂದು ಅವರು ಪತ್ರವನ್ನು ಪ್ರದರ್ಶಿಸುತ್ತಾ ಹೇಳಿದರು. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮಾತನಾಡಿ ಖಾನ್ ಅವರನ್ನು ಸಮರ್ಥಿಸಿಕೊಂಡರು. ಖಾನ್ ಅವರು ಈಗಾಗಲೇ ವಿಜಯನಗರದಲ್ಲಿ ಸೇವೆ ಸಲ್ಲಿಸಿರುವುದರಿಂದ ಅವರಿಗೆ ಬೇರೆ ಜಿಲ್ಲೆಯನ್ನು ನೀಡಬೇಕೆಂಬುದು ಅವರ ಉದ್ದೇಶವಾಗಿರುವಂತೆ ತೋರುತ್ತದೆ. ವಿಜಯನಗರ ದೂರವಿರುವುದರಿಂದ ಅಲ್ಲಿಗೆ ಹೋಗಲು ಅವರಿಗೆ ಅನಾರೋಗ್ಯದ ಸಮಸ್ಯೆಯಿದೆ. ಹೀಗಾಗಿ ಅವರು ಮನವಿ ಸಲ್ಲಿಸಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
"ಇದು ರಾಜ್ಯ, ದೇಶ ಮತ್ತು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ: ಉಪಮುಖ್ಯಮಂತ್ರಿಗಳು ನೀಡಿದ ಆರೋಗ್ಯ ಸಂಬಂಧಿತ ವಿವರಣೆಯನ್ನು ತಳ್ಳಿಹಾಕಿದ ಸುನಿಲ್ ಕುಮಾರ್, "ಯಾವ ಆರೋಗ್ಯ? ಜನರು ಇಂತಹ ವಿಷಯಗಳನ್ನು ಸಹಿಸುವುದಿಲ್ಲ. ಇಂತಹ ವಿಷಯಗಳನ್ನು ಸಮರ್ಥಿಸಿಕೊಳ್ಳಬೇಡಿ. ಅಂತಹ ಸಚಿವರನ್ನು ಅಮಾನತುಗೊಳಿಸಿ. ಅವರನ್ನು ಏಕೆ ಇಟ್ಟುಕೊಳ್ಳಬೇಕು?" ಎಂದು ಹೇಳಿದರು.
ಬಿಜೆಪಿ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವಥ್ ನಾರಾಯಣ್ ಕೂಡ ಖಾನ್ ಅವರ ವರ್ತನೆಯನ್ನು ಪ್ರಶ್ನಿಸಿದರು. ಈ ಕೃತ್ಯವನ್ನು ಸಮರ್ಥಿಸಲು ಅಥವಾ ಬೆಂಬಲಿಸಲು ಸಾಧ್ಯವಿಲ್ಲ. ಯಾವುದೇ ಭಾರತೀಯರು ಈ ರೀತಿಯಾಗಿ ವರ್ತಿಸುವುದಿಲ್ಲ, ಆದರೆ ಕರ್ನಾಟಕದಲ್ಲಿ ಅಂತಹ ವ್ಯಕ್ತಿಯೊಬ್ಬರು ಸಚಿವರಾಗಿರುವುದು ದುರದೃಷ್ಟಕರ. "ಇದು ರಾಜ್ಯ, ದೇಶ ಮತ್ತು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂದು ಅವರು ಪ್ರತಿಪಾದಿಸಿದರು.
ರಾಷ್ಟ್ರಧ್ವಜವನ್ನು ಹಾರಿಸಲು ಸಮಯವಿಲ್ಲದ ಸಚಿವರು ಕರ್ನಾಟಕ ಮತ್ತು ಅದರ ಜನರಿಗೆ ಬೇಕಾಗಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ," ಎಂದು ಸುನಿಲ್ ಕುಮಾರ್ ಹೇಳಿದರು. ಖಾನ್ ಅವರ ನಡೆಯನ್ನು ಸಮರ್ಥಿಸಿಕೊಂಡ ಪರಮೇಶ್ವರ್, ಅನಾರೋಗ್ಯದ ಕಾರಣದಿಂದಾಗಿ ಖಾನ್ ಅವರಿಗೆ ವಿಜಯನಗರಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಮುಖ್ಯಮಂತ್ರಿಗಳು ಪರ್ಯಾಯ ವ್ಯವಸ್ಥೆ ಮಾಡಿದ್ದರು ಎಂದು ಪುನರುಚ್ಚರಿಸಿದರು. ಆದರೆ, ಖಾನ್ ಅವರ ಪತ್ರದಲ್ಲಿ ಅನಾರೋಗ್ಯವನ್ನು ಕಾರಣವಾಗಿ ಉಲ್ಲೇಖಿಸಿರಲಿಲ್ಲ ಎಂದು ಬಿಜೆಪಿ ಶಾಸಕರು ಗಮನ ಸೆಳೆದರು.
ಬಿಜೆಪಿ ಸಭಾತ್ಯಾಗ: ಸುನಿಲ್ ಕುಮಾರ್ ಅವರಿಗೆ ತಿರುಗೇಟು ನೀಡಿದ ಪರಮೇಶ್ವರ್, ರಾಷ್ಟ್ರಧ್ವಜವನ್ನು ಗೌರವಿಸುವ ಬಗ್ಗೆ ನಾವು ಬಿಜೆಪಿಯಿಂದ ಕಲಿಯಬೇಕಾದ ಅಗತ್ಯವಿಲ್ಲ ಎಂದರು. ಉಪಮುಖ್ಯಮಂತ್ರಿಗಳು ಪದೇ ಪದೇ ಆರೋಗ್ಯದ ಕಾರಣಗಳನ್ನು ಪ್ರಸ್ತಾಪಿಸಿದಾಗ, ಸುನಿಲ್ ಕುಮಾರ್, "ಈ ಸರ್ಕಾರದ ಮನಸ್ಥಿತಿಗೆ ಆರೋಗ್ಯದ ಸಮಸ್ಯೆ ಇದೆ, ಅಷ್ಟೇ" ಎಂದು ಹೇಳಿದರು. ನಂತರ, ಸರ್ಕಾರ ಮತ್ತು ಸಚಿವರ ನಡವಳಿಕೆಯನ್ನು "ಅಪಮಾನಕಾರಿ" ಎಂದು ಬಣ್ಣಿಸಿದ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು.
ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಖಾನ್ ಅವರ ನಿರ್ಧಾರವನ್ನು "ದೇಶಕ್ಕೆ ಮಾಡಿದ ಅವಮಾನ" ಎಂದು ಕರೆದರು. ಮುಖ್ಯಮಂತ್ರಿಗಳು ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಹಾಗೆ ಮಾಡಲು ವಿಫಲವಾದರೆ ಇತರ ಸಚಿವರು ಕೂಡ ಇದೇ ರೀತಿಯಲ್ಲಿ ವರ್ತಿಸಲು ಪ್ರೇರೇಪಣೆ ಸಿಕ್ಕಂತಾಗುತ್ತದೆ ಎಂದು ಎಚ್ಚರಿಸಿದರು. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದವರ ವಿರುದ್ಧ ಇಲ್ಲಿಯವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಈಗ, ಸಚಿವರೊಬ್ಬರು ಕೂಡ ದೇಶಕ್ಕೆ ಅಗೌರವ ತೋರಿದ್ದಾರೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಜನರೇ ಅವರಿಗೆ ಪಾಠ ಕಲಿಸುತ್ತಾರೆ" ಎಂದು ಅವರು ಹೇಳಿದರು.