

ಮೈಸೂರು: ಕರ್ನಾಟಕದ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರು ಶಂಕಿತ ಬೇಟೆಗಾರರ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ನಿರಾಕರಿಸಿದ್ದು, ಇದರಿಂದಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಮುಂಭಾಗ ಭಾನುವಾರ ಭಾರೀ ಹೈಡ್ರಾಮಾ ನಡೆಯಿತು.
ಘಟನೆ ನಡೆದು 36 ಗಂಟೆ ಕಳೆದರೂ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿಆರ್‌ಐ) ಶವಾಗಾರದಲ್ಲೇ ಮೃತದೇಹಗಳು ಉಳಿದಿದ್ದವು.
ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಶವಾಗಾರದ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಅಧಿಕಾರಿಗಳಿಂದ ಸ್ಪಷ್ಟ ಉತ್ತರಕ್ಕೆ ಆಗ್ರಹಿಸಿದರು.
ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಅರಣ್ಯ ಸಿಬ್ಬಂದಿಯ ಹೆಸರುಗಳನ್ನು ಹಲವು ಬಾರಿ ಕೇಳಿದ್ದರೂ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದರು.
ಮೂವರು ಮೃತಪಟ್ಟ ಸಂದರ್ಭಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಮೃತ ಮೂವರಿಗೂ ಚಿಕ್ಕ ಮಕ್ಕಳಿದ್ದು, ಅವರ ಕುಟುಂಬಗಳ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಮೃತ ಪೀಟರ್ ಅವರ ಸಹೋದರಿ ಮಾರ್ಗರೇಟ್ ಮಾತನಾಡಿ, ಮೊದಲು ಪಂಚನಾಮೆಗಾಗಿ ಹಾಗೂ ಬಳಿಕ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರ ಸಹಿ ಪಡೆಯಲು ಪ್ರಯತ್ನಿಸಲಾಗಿತ್ತು. ಆದರೆ, ಕುಟುಂಬಸ್ಥರು ಸಹಿ ಹಾಕಲು ನಿರಾಕರಿಸಿದ್ದು, ಅಧಿಕಾರಿಗಳಿಂದ ಲಿಖಿತ ವಿವರಣೆ ಮತ್ತು ಭರವಸೆ ನೀಡಿದ ಬಳಿಕವಷ್ಟೇ ಒಪ್ಪಿಗೆ ನೀಡುವುದಾಗಿ ತಿಳಿಸಿದ್ದಾರೆ.
“ನಾವು ಸಹಿ ಹಾಕಲು ಒಪ್ಪಿಲ್ಲ. ನಮಗೆ ಲಿಖಿತ ವಿವರಣೆ ಮತ್ತು ಭರವಸೆ ಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಥವಾ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮನ್ನು ಭೇಟಿಯಾಗಬೇಕು,” ಎಂದು ಅವರು ಹೇಳಿದರು.
ಅಲ್ಲದೆ, ಗುಂಡಿನ ದಾಳಿಗೆ ಮುನ್ನ ನಡೆದ ಘಟನಾವಳಿಗಳ ಸಂಪೂರ್ಣ ವಿವರ ನೀಡಬೇಕು ಹಾಗೂ ಎನ್‌ಕೌಂಟರ್‌ನಲ್ಲಿ ಹಾಜರಿದ್ದ ಪ್ರತಿಯೊಬ್ಬ ಅರಣ್ಯ ಸಿಬ್ಬಂದಿಯ ಪಾತ್ರವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದರು.
ಸಚಿವರ ಭರವಸೆ ಬಳಿಕ ಕುಟುಂಬಸ್ಥರ ಸಮ್ಮತಿ
ಸಂಜೆಯ ವೇಳೆಗೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮೃತರ ಕುಟುಂಬಗಳಿಗೆ ಆಪ್ತರೆಂದು ಹೇಳಲಾಗಿರುವ ಸೆಲ್ವಕುಮಾರ್ ಅವರು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತನಾಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
ಕುಟುಂಬಸ್ಥರು ಮುಂದಿಟ್ಟಿರುವ ಬೇಡಿಕೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವರ ಭರವಸೆ ಬಳಿಕ ಮೃತ ಪೀಟರ್ ಅವರ ಕುಟುಂಬಸ್ಥರು ಮರಣೋತ್ತರ ಪರೀಕ್ಷೆಗೆ ಮೃತದೇಹ ಒಪ್ಪಿಸಲು ಸಮ್ಮತಿಸಿದರು. ಉಳಿದ ಮೃತದೇಹಗಳನ್ನೂ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆಗಾಗಿ ಅವರ ಗ್ರಾಮಕ್ಕೆ ಕಳುಹಿಸುವ ನಿರೀಕ್ಷೆಯಿದೆ.