

ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡುಪ್ರಾಣಿಗಳ ಅಕ್ರಮ ಬೇಟೆ (Poaching) ಗಣನೀಯವಾಗಿ ಹೆಚ್ಚಾಗಿದ್ದು, ವನ್ಯಜೀವಿ ಪ್ರೇಮಿಗಳಲ್ಲಿ ತೀವ್ರ ಕಳವಳ ಮೂಡಿಸಿದೆ.
ಕೇವಲ 30 ದಿನಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಐದು ಪ್ರಮುಖ ಬೇಟೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಪೈಕಿ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಎನ್‌ಕೌಂಟರ್ ತೀವ್ರ ರಾಜಕೀಯ ಹಾಗೂ ಸಾಮಾಜಿಕ ವಿವಾದಕ್ಕೆ ಕಾರಣವಾಗಿದೆ.
ಕಾಡುಪ್ರಾಣಿಗಳ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯೇ ಈ ಅಕ್ರಮ ದಂಧೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಕಳೆದ 30 ದಿನಗಳಲ್ಲಿ ಐದು ವನ್ಯಜೀವಿ ಬೇಟೆ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ.
ಸೋಮವಾರ ಬೀದರ್‌ನಲ್ಲಿ ತೆಲಂಗಾಣ ಮೂಲದ ಮೂವರು ಶಂಕಿತ ಬೇಟೆಗಾರರನ್ನು ಸ್ಥಳೀಯರು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಹನೂರು ಗುಂಡಿನ ದಾಳಿ ಪ್ರಕರಣದಲ್ಲಿ ಮೃತಪಟ್ಟ ಮೂವರ ಘಟನೆಯ ಸಂದರ್ಭ ಹಾಗೂ ಗುಂಡಿನ ದಾಳಿ ಕುರಿತು ಹಲವು ಪ್ರಶ್ನೆಗಳನ್ನು ಎತ್ತುತ್ತಿರುವ ನಡುವೆಯೇ, ರಾಜ್ಯದಲ್ಲಿ ಮತ್ತಷ್ಟು ಬೇಟೆ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಳೆದ ಒಂದು ತಿಂಗಳಲ್ಲಿ ವರದಿಯಾದ ಉಳಿದ ಮೂರು ಪ್ರಕರಣಗಳು ಎಂ.ಎಂ. ಹಿಲ್ಸ್ ಅಭಯಾರಣ್ಯ, ವಿಜಯನಗರದ ಮರಿಯಮ್ಮನ ಪಾಳ್ಯ ಗ್ರಾಮ ಹಾಗೂ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದಿವೆ.
ಗುಂಡ್ಲುಪೇಟೆಯಲ್ಲಿ ಹುಲಿಯ ಉಗುರುಗಳನ್ನು ಹೊಂದಿದ್ದ ಆರೋಪದಲ್ಲಿ ಓರ್ವನನ್ನು ಬಂಧಿಸಲಾಗಿದೆ. ವಿಜಯನಗರದಲ್ಲಿ ಕಾಡುಹಂದಿಗಳನ್ನು ಬೇಟೆಯಾಡಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ.
ಎಂ.ಎಂ. ಹಿಲ್ಸ್‌ನಲ್ಲಿ ನಡೆದ ಕಾಡುಹಂದಿ ಬೇಟೆ ಪ್ರಕರಣದಲ್ಲಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದು, ಆರೋಪಿಯ ಬಲಗಾಲಿಗೆ ಗಾಯವಾಗಿದೆ.
ಇದರಿಂದ ಕಳೆದ 30 ದಿನಗಳಲ್ಲಿ ಕರ್ನಾಟಕದಲ್ಲಿ ನಡೆದ ಐದು ಬೇಟೆ ಯತ್ನಗಳು ಹಾಗೂ ಬಂಧನ ಪ್ರಕರಣಗಳಲ್ಲಿ ಒಟ್ಟು ಎಂಟು ಮಂದಿ ಬಂಧಿತರಾಗಿದ್ದಾರೆ.
ಅರಣ್ಯ ಅಧಿಕಾರಿಗಳು ಒಂದು ಗಂಡು ಕೃಷ್ಣಮೃಗದ ಮೃತದೇಹವನ್ನು ವಶಪಡಿಸಿಕೊಂಡಿದ್ದು, ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.
ವನ್ಯಜೀವಿ ಮಾಂಸಕ್ಕೆ ಹೆಚ್ಚಿದ ಬೇಡಿಕೆ
ರಾಜ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವನ್ಯಜೀವಿ ಮಾಂಸಕ್ಕೆ ಬೇಡಿಕೆ ಹೆಚ್ಚಿರುವುದು ವನ್ಯಜೀವಿ ಬೇಟೆ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ, ಅರಣ್ಯ ಇಲಾಖೆ ಕೇವಲ ಮಾಂಸಾಹಾರಿ ಪ್ರಾಣಿಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದನ್ನು ಬದಲಿಸಿ, ಕಳೆದ ಕೆಲವು ವರ್ಷಗಳಿಂದ ಬೇಟೆಗಾರರ ಗುರಿಯಾಗುತ್ತಿರುವ ಸಸ್ಯಾಹಾರಿ ಪ್ರಾಣಿಗಳಾದ ಕಾಡುಕೋಣ, ಕಡವೆ ಹಾಗೂ ಚುಕ್ಕಿ ಜಿಂಕೆಗಳ ರಕ್ಷಣೆಯತ್ತಲೂ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ,
ಕೊಡಗಿನ ವನ್ಯಜೀವಿ ಸಂರಕ್ಷಣಾವಾದಿ ಪಿ.ಎಂ. ಮುತ್ತಣ್ಣ ಮಾತನಾಡಿ, ಕೋವಿಡ್ ನಂತರ ವನ್ಯಜೀವಿ ಬೇಟೆಯ ಸ್ವರೂಪ ಬದಲಾಗಿದೆ ಎಂದು ಹೇಳಿದರು.
ಟ್ರೋಫಿ ಹಂಟಿಂಗ್ (ಮನರಂಜನೆ ಅಥವಾ ಕ್ರೀಡೆಗಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡುವುದು ಮತ್ತು ಅವುಗಳ ದೇಹದ ಭಾಗಗಳನ್ನು (ಕೊಂಬು, ಚರ್ಮ ಅಥವಾ ತಲೆ) ಸ್ಮಾರಕವಾಗಿ ಅಥವಾ ಪ್ರದರ್ಶನಕ್ಕಾಗಿ ಇಟ್ಟುಕೊಳ್ಳುವುದು)ಬೇಟೆಗಾರರ ಗುಂಪುಗಳು ಈಗ ಮಾಂಸಕ್ಕಾಗಿ ಕಾಡುಕೋಣ ಮತ್ತು ಜಿಂಕೆಗಳನ್ನು ಬೇಟೆಯಾಡುತ್ತಿದ್ದಾರೆ.
ದೊಡ್ಡ ಗಂಡು ಕಾಡುಕೋಣವನ್ನು ಕೊಂದರೆ ಸುಮಾರು 400ರಿಂದ 500 ಕೆ.ಜಿ.ವರೆಗೆ ಮಾಂಸ ಸಿಗಬಹುದು. ಅದನ್ನು ಕೆ.ಜಿ.ಗೆ ರೂ.1,500ರಿಂದ ರೂ.2,000ರವರೆಗೆ ಮಾರಾಟ ಮಾಡಲಾಗುತ್ತದೆ. ಒಂದೇ ರಾತ್ರಿಯಲ್ಲಿ ಇಷ್ಟೊಂದು ಆದಾಯ ನೀಡುವ ಬೇರೆ ಯಾವ ಉದ್ಯಮವಿದೆ? ಇದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ” ಎಂದು ತಿಳಿಸಿದ್ದಾರೆ.
ಕರ್ನಾಟಕದ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ಮಾತನಾಡಿ, ಚಾಮರಾಜನಗರ ವನ್ಯಮಾಂಸ ಬೇಟೆಗೆ ಕುಖ್ಯಾತವಾಗಿದೆ ಎಂದು ಹೇಳಿದರು.
ಜನಸ್ನೇಹಿ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಹನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಯಾವುದೇ ಅಪಾಯವನ್ನೂ ಎದುರಿಸಲು ಸಿದ್ಧರಾಗಿರುವ ಅನೇಕರು ಇದ್ದಾರೆ. ಹೀಗಾಗಿ ರಾತ್ರಿ ಗಸ್ತು ಕಡ್ಡಾಯವಾಗಬೇಕು. ಹನೂರು ಗುಂಡಿನ ದಾಳಿ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿಯ ಬೆನ್ನಿಗೆ ಸರ್ಕಾರ ನಿಲ್ಲಬೇಕು” ಎಂದು ತಿಳಿಸಿದ್ದಾರೆ.
ಹನೂರಿನಲ್ಲಿ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರು ಬೇಟೆಗಾಗಿ ಅರಣ್ಯ ಪ್ರವೇಶಿಸಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದೂ ಹೇಳಿದ್ದಾರೆ.
ರಾಷ್ಟ್ರೀಯ ರಜಾದಿನಗಳಾದ ಆಗಸ್ಟ್ 15 ಮತ್ತು ಜನವರಿ 26ಕ್ಕೂ ಒಂದು ದಿನ ಮುಂಚಿತವಾಗಿ ಅನೇಕ ಬೇಟೆ ಕಾರ್ಯಾಚರಣೆಗಳನ್ನು ಯೋಜಿಸಲಾಗುತ್ತದೆ.
ಹಬ್ಬಗಳ ಸಂದರ್ಭದಲ್ಲಿಯೂ ಬೇಟೆಗಾರರು ದಾಳಿ ನಡೆಸಲು ಯೋಜಿಸುತ್ತಾರೆ. ಏಕೆಂದರೆ ಸ್ಥಳೀಯ ಅರಣ್ಯ ಸಿಬ್ಬಂದಿಯ ಬಹುತೇಕರು ಧ್ವಜಾರೋಹಣಕ್ಕಾಗಿ ಮುಖ್ಯ ಕಚೇರಿಗೆ ತೆರಳಿರುತ್ತಾರೆ ಎಂದು ಹೇಳಿದ್ದಾರೆ.