ಹನೂರು ಶೂಟೌಟ್ ಕೇಸ್'ಗೆ ಬಿಗ್ ಟ್ವಿಸ್ಟ್: ಸ್ಥಳದಲ್ಲಿ ಶಸ್ತ್ರಾಸ್ತ್ರ, ಮಾಂಸದೊಂದಿಗೆ ‘ಬಳಸದ’ ಚಪ್ಪಲಿ ಪತ್ತೆ, ಹೆಚ್ಚಿದ ಅನುಮಾನ..!

ಬೇಟೆಗಾಗಿ ಅರಣ್ಯದಲ್ಲಿ ಸಂಚರಿಸಿದ್ದರೆ ಚಪ್ಪಲಿಗಳ ಮೇಲೆ ಧೂಳು ಅಥವಾ ರಕ್ತದ ಕಲೆಗಳಾದರೂ ಇರಬೇಕಿತ್ತು. ಆದರೆ, ಅವು ಸಂಪೂರ್ಣ ಹೊಸದಾಗಿರುವಂತೆ ಕಾಣುತ್ತಿವೆ ಎಂದು ಕುಟುಂಬಸ್ಥರು ವಾದಿಸಿದ್ದಾರೆ.
Recovered items from the spot where the three men were shot dead by forest personnel near Shagya village in Hanur taluk office Chamarajanagar
ಸ್ಥಳದಲ್ಲಿ ವಶಪಡಿಸಿಕೊಂಡಿರುವ ವಸ್ತುಗಳು.
Updated on

ಚಾಮರಾಜನಗರ: ಹನೂರು ತಾಲ್ಲೂಕಿನ ಶಾಗ್ಯ ಗ್ರಾಮದ ಸಮೀಪದ ಅರಣ್ಯದಲ್ಲಿ ಮೂವರು ಮೃತಪಟ್ಟ ಶೂಟೌಟ್‌ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.

ಘಟನಾ ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ವನ್ಯಜೀವಿ ಮಾಂಸದ ಜತೆಗೆ ಸ್ಟಿಕ್ಕರ್‌ ಕೂಡ ತೆಗೆಯದಂತೆ ಕಾಣುವ ‘ಬಳಸದ’ ಜೋಡಿ ಚಪ್ಪಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೇಟೆಗೆ ತೆರಳಿದ್ದರೆ ಚಪ್ಪಲಿಗಳು ಇಷ್ಟು ಹೊಸದಾಗಿರಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎತ್ತುತ್ತಿದ್ದಾರೆ.

ಅರಣ್ಯ ಇಲಾಖೆಯ ಪ್ರಕಾರ, ಕಾರ್ಯಾಚರಣೆ ವೇಳೆ ಆರೋಪಿತ ಬೇಟೆಗಾರರಿಂದ ಎರಡು ನಾಡ ಬಂದೂಕುಗಳು, ಟಾರ್ಚ್‌ಲೈಟ್‌ಗಳು, ಗುಂಡುಗಳು, ಬೇಟೆಯ ಉಪಕರಣಗಳು ಹಾಗೂ ಸುಮಾರು 20ರಿಂದ 30 ಕೆ.ಜಿ. ವನ್ಯಜೀವಿ ಮಾಂಸ ಎಂದು ಶಂಕಿಸಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಆದರೆ, ಸ್ಥಳದಲ್ಲಿ ಪತ್ತೆಯಾದ ಪ್ಯಾರಗಾನ್‌ ಕಂಪನಿಯ ಹೊಸ ಜೋಡಿ ಚಪ್ಪಲಿ ಇದೀಗ ಪ್ರಕರಣದ ಪ್ರಮುಖ ಚರ್ಚೆಯ ವಿಷಯವಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಲಭ್ಯವಾಗಿರುವ ಛಾಯಾಚಿತ್ರದಲ್ಲಿ ಚಪ್ಪಲಿಗಳ ಮೇಲಿನ ಸ್ಟಿಕ್ಕರ್‌ಗಳನ್ನೂ ತೆಗೆಯದಿರುವುದು ಕಂಡು ಬಂದಿದೆ. ಆಗಸ್ಟ್‌ 15ರಂದು ಮಧ್ಯಾಹ್ನ 12.29ಕ್ಕೆ ತೆಗೆದಿರುವುದಾಗಿ ಛಾಯಾಚಿತ್ರದ ಸಮಯದ ವಿವರ ಸೂಚಿಸುತ್ತದೆ.

ಬೇಟೆಗಾಗಿ ಅರಣ್ಯದಲ್ಲಿ ಸಂಚರಿಸಿದ್ದರೆ ಚಪ್ಪಲಿಗಳ ಮೇಲೆ ಧೂಳು ಅಥವಾ ರಕ್ತದ ಕಲೆಗಳಾದರೂ ಇರಬೇಕಿತ್ತು. ಆದರೆ, ಅವು ಸಂಪೂರ್ಣ ಹೊಸದಾಗಿರುವಂತೆ ಕಾಣುತ್ತಿವೆ ಎಂದು ಕುಟುಂಬಸ್ಥರು ವಾದಿಸಿದ್ದಾರೆ.

Recovered items from the spot where the three men were shot dead by forest personnel near Shagya village in Hanur taluk office Chamarajanagar
ತಪ್ಪು ಸಾಬೀತಾದರೆ ರಾಜೀನಾಮೆಗೆ ಸಿದ್ಧ, ಮೃತರು ಬೇಟೆಗಾರರೆಂದು ದೃಢಪಟ್ಟರೆ ಪರಿಹಾರವಿಲ್ಲ: ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ತನಿಖೆಯಲ್ಲಿ ಪ್ರಮುಖ ಸಾಕ್ಷ್ಯವಾದ ಶಸ್ತ್ರಾಸ್ತ್ರ, ಮಾಂಸ

ಈ ನಡುವೆ ಮೂವರು ರಾತ್ರಿ ಅರಣ್ಯಕ್ಕೆ ತೆರಳಿದ್ದ ಉದ್ದೇಶದ ಬಗ್ಗೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ನಡುವೆ ವಿಭಿನ್ನ ಹೇಳಿಕೆಗಳು ಕೇಳಿ ಬರುತ್ತಿವೆ.

ಮೃತರು ಕಾಣೆಯಾಗಿದ್ದ ಜಾನುವಾರುಗಳನ್ನು ಹುಡುಕಿಕೊಂಡು ಅರಣ್ಯಕ್ಕೆ ತೆರಳಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದರೆ, ಮೂವರು ಹಾಗೂ ಅವರೊಂದಿಗೆ ಇದ್ದ ಮತ್ತೊಬ್ಬ ವ್ಯಕ್ತಿ ವನ್ಯಜೀವಿಗಳನ್ನು ಬೇಟೆಯಾಡಲು ಅರಣ್ಯ ಪ್ರವೇಶಿಸಿದ್ದರು ಎಂದು ಅರಣ್ಯ ಇಲಾಖೆ ಹೇಳಿದೆ.

ಆಗಸ್ಟ್‌ 14ರಂದು ರಾತ್ರಿ 8 ಗಂಟೆ ಸುಮಾರಿಗೆ ಕೆಲವರು ಅಕ್ರಮವಾಗಿ ಅರಣ್ಯ ಪ್ರವೇಶಿಸಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಮಾಹಿತಿ ಅರಣ್ಯ ಅಧಿಕಾರಿಗಳಿಗೆ ಬಂದಿತ್ತು. ಬಳಿಕ ಎರಡು ತಂಡಗಳನ್ನು ಅರಣ್ಯಕ್ಕೆ ಕಳುಹಿಸಲಾಗಿತ್ತು. ಟಾರ್ಚ್‌ಲೈಟ್‌ ಬಳಸಿ ಅರಣ್ಯದೊಳಗೆ ಕೆಲವರು ಸಂಚರಿಸುತ್ತಿರುವುದು ಸಿಬ್ಬಂದಿಗೆ ಕಂಡುಬಂದಿತ್ತು ಎಂದು ಇಲಾಖೆ ತಿಳಿಸಿದೆ.

ಬೆಳಗ್ಗೆ ಸುಮಾರು 5.30ರ ವೇಳೆಗೆ ತಂಡಗಳು ಕಾರಡಿಕಲ್ಲು ಒಡ್ಡು ಅರಣ್ಯ ಪ್ರದೇಶ ತಲುಪಿದಾಗ, ಎತ್ತರದ ಪ್ರದೇಶದಲ್ಲಿ ಅಡಗಿದ್ದ ಆರೋಪಿತ ಬೇಟೆಗಾರರು ಅರಣ್ಯ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು ಎಂದು ಇಲಾಖೆ ಹೇಳಿದೆ.

ನಾಡ ಬಂದೂಕಿನಿಂದ ಹಾರಿಸಿದ ಗುಂಡುಗಳು ಚದುರಿದ ಪರಿಣಾಮ ಕೆಲ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಬಳಿಕ ಅರಣ್ಯ ಸಿಬ್ಬಂದಿ ನಡೆಸಿದ ಪ್ರತಿದಾಳಿ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಈ ನಡುವೆ ವಶಪಡಿಸಿಕೊಂಡ ವಸ್ತುಗಳನ್ನು ತನಿಖಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ದಿನೇಶ್‌ ಕುಮಾರ್‌ ಮೀನಾ ಅವರ ಮುಂದೆ ಅರಣ್ಯ ಇಲಾಖೆ ಹಾಜರುಪಡಿಸಿದೆ.

Rifles recovered from the spot where the three alleged poachers were shot dead by forest personnel in Hanur taluk
ಸ್ಥಳದಲ್ಲಿ ವಶಪಡಿಸಿಕೊಂಡಿರುವ ಗನ್.

ಎನ್‌ಕೌಂಟರ್‌ ನಡೆದ ಶಾಗ್ಯ ಅರಣ್ಯ ಪ್ರದೇಶ, ಹನೂರು ಅರಣ್ಯ ಕಚೇರಿ ಹಾಗೂ ಗ್ರಾಮಸ್ಥರ ಪ್ರತಿಭಟನೆಯಲ್ಲಿ ಹಾನಿಗೊಳಗಾದ ಬೇಟೆ ತಡೆ ಶಿಬಿರಗಳಿಗೂ ಮೀನಾ ಭೇಟಿ ನೀಡಿದ್ದಾರೆ.

ಸುಮಾರು 20ರಿಂದ 30 ಕೆ.ಜಿ. ತೂಕದ ಎರಡು ಚೀಲಗಳಲ್ಲಿದ್ದ ವನ್ಯಜೀವಿ ಮಾಂಸ ಎಂದು ಶಂಕಿಸಲಾದ ವಸ್ತುಗಳನ್ನೂ ಇಲಾಖೆ ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದೆ.

ಸ್ಥಳದಿಂದ ವಶಪಡಿಸಿಕೊಂಡಿದ್ದ ಒಂದು ಜೊತೆ ಚಪ್ಪಲಿ, ಎರಡು ಲೀಟರ್‌ ಸಾಮರ್ಥ್ಯದ ತಂಪು ಪಾನೀಯದ ಬಾಟಲಿಯಲ್ಲಿ ಸುಮಾರು 250 ಮಿ.ಲೀ. ನೀರು ಸೇರಿದಂತೆ ಇತರ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ.

ವಶಪಡಿಸಿಕೊಂಡ ಮಾಂಸವನ್ನು ಪರೀಕ್ಷೆಗೆ ಕಳುಹಿಸಿ, ಅದು ನಿಜವಾಗಿಯೂ ವನ್ಯಜೀವಿಯ ಮಾಂಸವೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಗ್ರಾಮಸ್ಥರು ಎನ್‌ಕೌಂಟರ್‌ ನಕಲಿ ಎಂದು ಆರೋಪಿಸಿ ತೀವ್ರ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ, ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಹಾಗೂ ಮಾಂಸ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳಾಗುವ ಸಾಧ್ಯತೆಯಿದೆ.

ಪ್ರತಿಭಟನೆ ವೇಳೆ ಏಳು ಬೇಟೆ ತಡೆ ಶಿಬಿರಗಳು ಹಾಗೂ ಒಂಬತ್ತು ವಸತಿ ಗೃಹಗಳಿಗೆ ಹಾನಿಯಾಗಿದೆ. ಪೀಠೋಪಕರಣಗಳು ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸ ಮಾಡಲಾಗಿದೆ.

ಅರಣ್ಯ ಇಲಾಖೆಯ ಒಂದು ನಾಲ್ಕು ಚಕ್ರ ವಾಹನ ಮತ್ತು ನಾಲ್ಕು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದ್ದು, ಈ ಸಂಬಂಧ ಪೊಲೀಸರಿಗೆ ಪ್ರತ್ಯೇಕ ದೂರುಗಳನ್ನು ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಘಟನಾ ಸ್ಥಳದಿಂದ ಪರಾರಿಯಾಗಿದ್ದ ವ್ಯಕ್ತಿಯ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮೃತಪಟ್ಟ ಮೂವರ ವಿರುದ್ಧ ಈ ಹಿಂದೆ ಯಾವುದೇ ಅರಣ್ಯ ಸಂಬಂಧಿತ ಪ್ರಕರಣಗಳು ದಾಖಲಾಗಿರಲಿಲ್ಲ ಎಂದು ಇಲಾಖೆ ಹೇಳಿದೆ.

ಮೃತರ ಕುಟುಂಬಗಳಿಗೆ ಪರಿಹಾರ

ಸೋಮವಾರ ಹನೂರು ತಹಶೀಲ್ದಾರ್‌ ಚೈತ್ರಾ ಅವರು ತೋಮಿಯಾರ್‌ ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ, ತಾಲ್ಲೂಕು ಆಡಳಿತದ ವತಿಯಿಂದ ಮೃತರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು.

ಇದೇ ವೇಳೆ ಶಾಸಕ ಮಂಜುನಾಥ್‌ ಅವರು ತಮ್ಮ ವೈಯಕ್ತಿಕ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ರೂ.10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com