

ಬೆಂಗಳೂರು: ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿದೇಶಿ ಪ್ರಜೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಡ್ರಗ್ಸ್ ಪ್ರಕರಣಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ಆರೋಪ ಎದುರಿಸುತ್ತಿರುವ 365 ವಿದೇಶಿಗರ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದ್ದು, ಅರ್ಹ ಪ್ರಕರಣಗಳನ್ನು ಹಿಂಪಡೆದು ಅವರನ್ನು ತಾಯ್ನಾಡಿಗೆ ಗಡಿಪಾರು ಮಾಡುವ ಪ್ರಕ್ರಿಯೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಗೃಹ ಇಲಾಖೆಯ ಪ್ರಕಾರ, ಕರ್ನಾಟಕದಲ್ಲಿ 365 ವಿದೇಶಿ ಪ್ರಜೆಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವರ ಪೈಕಿ ಸುಮಾರು 60–70 ಪ್ರತಿಶತ ಮಂದಿ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ಕಾಯ್ದೆ (NDPS Act) ಅಡಿಯಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಈ ಪ್ರಕರಣಗಳಲ್ಲಿ 2 ಕೊಲೆ ಪ್ರಕರಣಗಳು, 2 ಕೊಲೆ ಯತ್ನ ಪ್ರಕರಣಗಳು, ವಿದೇಶಿಗರ ಕಾಯ್ದೆಯಡಿ 26 ಪ್ರಕರಣಗಳು, ಲೈಂಗಿಕ ದೌರ್ಜನ್ಯದ 3 ಪ್ರಕರಣಗಳು, ಮಾನವ ಸಾಗಣೆಯ 14 ಪ್ರಕರಣಗಳು, ಕಳ್ಳತನದ 14 ಪ್ರಕರಣಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ 2 ಪ್ರಕರಣಗಳು ಹಾಗೂ ಸುಲಿಗೆಗೆ ಸಂಬಂಧಿಸಿದ 2 ಪ್ರಕರಣಗಳು ಸೇರಿವೆ. ಇವುಗಳ ಹೊರತಾಗಿಯೂ ಹಲವು ಇತರ ಅಪರಾಧ ಪ್ರಕರಣಗಳಿವೆ.
ಕೇಂದ್ರದ ನಿರ್ದೇಶನದ ಪ್ರಕಾರ, ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಗಳ ಪ್ರಕರಣಗಳನ್ನು ಹಿಂಪಡೆದು ಅವರನ್ನು ಗಡಿಪಾರು ಮಾಡಬಹುದಾಗಿದೆ. ಆದರೆ, ವಿದೇಶಿ ಪ್ರಜೆಗಳೊಂದಿಗೆ ಸೇರಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಭಾರತೀಯ ಪ್ರಜೆಗಳಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ. ಅವರ ವಿರುದ್ಧದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿಯಲಿದೆ.
ವಿದೇಶಿ ಪ್ರಜೆಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯಲ್ಲಿ ಪ್ರಾಸಿಕ್ಯೂಷನ್ ಇಲಾಖೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ. ಗೃಹ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪ್ರಕರಣಗಳನ್ನು ಪರಿಶೀಲಿಸುವ ಜತೆಗೆ, ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಿದೆ.
ಈ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಸಮಿತಿ ಹಾಗೂ ರಾಜ್ಯ ಮಟ್ಟದ ಸಮಿತಿ ಎಂಬ ಎರಡು ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯ ಸರ್ಕಾರಿ ಅಭಿಯೋಜಕರು ಹಾಗೂ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸರ್ಕಾರಿ ಅಭಿಯೋಜಕರು ಸಮಿತಿಯ ಸದಸ್ಯರಾಗಿರುತ್ತಾರೆ.
ರಾಜ್ಯ ಮಟ್ಟದ ಪರಿಶೀಲನಾ ಸಮಿತಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಹುದ್ದೆಯ ಅಧಿಕಾರಿಯೊಬ್ಬರು ಹಾಗೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಸರ್ಕಾರಿ ಅಭಿಯೋಜಕರು, ಪ್ರಾಸಿಕ್ಯೂಷನ್ ನಿರ್ದೇಶಕರ ಮೂಲಕ ಗೃಹ ಇಲಾಖೆಗೆ ಪ್ರಕರಣ ಹಿಂಪಡೆಯುವಂತೆ ಶಿಫಾರಸು ಮಾಡಬಹುದು. ಸಮಿತಿಗಳು ಪ್ರಸ್ತಾವನೆಗೆ ಅನುಮೋದನೆ ನೀಡಿದ ಬಳಿಕ, ಪ್ರಕರಣವನ್ನು ಹಿಂಪಡೆಯಲು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದಿಂದ ಅಂತಿಮ ಅನುಮತಿ ಪಡೆಯಬೇಕು. ನಂತರ ಪ್ರಕರಣ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
15 ದಿನಗಳಲ್ಲಿ ಗಡಿಪಾರು
ಪ್ರಕರಣ ಹಿಂಪಡೆಯಲಾಗಿರುವ ವಿದೇಶಿ ಪ್ರಜೆಯ ಬಳಿ ತನ್ನ ದೇಶದ ಮಾನ್ಯ ಪಾಸ್‌ಪೋರ್ಟ್ ಹಾಗೂ ಅಗತ್ಯ ದಾಖಲೆಗಳು ಇದ್ದರೆ, ಅವರನ್ನು 15 ದಿನಗಳೊಳಗೆ ಗಡಿಪಾರು ಮಾಡಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
ಅಗತ್ಯ ದಾಖಲೆಗಳು ಇಲ್ಲದಿದ್ದರೆ, ಅಂತಹ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ಬಂಧನ ಕೇಂದ್ರಗಳಲ್ಲಿ ಇರಿಸಲಾಗುತ್ತದೆ. ಅಗತ್ಯ ದಾಖಲೆಗಳನ್ನು ಪಡೆದುಕೊಂಡ ಬಳಿಕ ಅವರನ್ನು ಅವರ ತಾಯ್ನಾಡಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.