ಕರ್ನಾಟಕದ 101 ತಾಲೂಕುಗಳು ಬರಪೀಡಿತ: ಅವು ಯಾವುವು? ಇಲ್ಲಿದೆ ಪಟ್ಟಿ...

2023ರ ಜುಲೈನಲ್ಲಿ ತಡವಾಗಿಯಾದರೂ ಮಳೆ ಸುರಿದು ಕೆಲವೆಡೆ ಬೆಳೆ ಬೆಳವಣಿಗೆಗೆ ನೆರವಾಗಿತ್ತು. ಆದರೆ ಪ್ರಸಕ್ತ ಮುಂಗಾರು ಅವಧಿಯಲ್ಲಿ ಸಾಕಷ್ಟು ಮಳೆಯಾಗದಿರುವುದರ ಜೊತೆಗೆ ಆರಂಭಿಕ ಹಂತದಲ್ಲೇ ಬೆಳೆ ಬೆಳವಣಿಗೆಯೂ ಕುಂಠಿತವಾಗಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.
Drought taluk karntaka
ಕರ್ನಾಟಕದ ತಾಲ್ಲೂಕುಗಳು ಬರಪೀಡಿತ
Updated on

ಕರ್ನಾಟಕದಲ್ಲಿ ಈ ಮುಂಗಾರು ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. ದಾಖಲೆಗಳ ಪ್ರಕಾರ, 1976ರ ಬಳಿಕ ಕಳೆದ 44 ವರ್ಷಗಳಲ್ಲೇ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಇದರಿಂದ 2023ರ ಬರ ಪರಿಸ್ಥಿತಿಗಿಂತಲೂ ಈ ಬಾರಿಯ ಸ್ಥಿತಿ ಗಂಭೀರವಾಗಿದೆ.

2023ರ ಜುಲೈನಲ್ಲಿ ತಡವಾಗಿಯಾದರೂ ಮಳೆ ಸುರಿದು ಕೆಲವೆಡೆ ಬೆಳೆ ಬೆಳವಣಿಗೆಗೆ ನೆರವಾಗಿತ್ತು. ಆದರೆ ಪ್ರಸಕ್ತ ಮುಂಗಾರು ಅವಧಿಯಲ್ಲಿ ಸಾಕಷ್ಟು ಮಳೆಯಾಗದಿರುವುದರ ಜೊತೆಗೆ ಆರಂಭಿಕ ಹಂತದಲ್ಲೇ ಬೆಳೆ ಬೆಳವಣಿಗೆಯೂ ಕುಂಠಿತವಾಗಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.

ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಜೂನ್ 1ರಿಂದ ಆಗಸ್ಟ್ 26ರವರೆಗೆ ರಾಜ್ಯದಲ್ಲಿ ಒಟ್ಟಾರೆ ಶೇ.30ರಷ್ಟು ಮಳೆ ಕೊರತೆ ದಾಖಲಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 666 ಮಿ.ಮೀ. ಮಳೆಯಾಗಬೇಕಾಗಿದ್ದು, ಈ ಬಾರಿ ಕೇವಲ 465 ಮಿ.ಮೀ. ಮಳೆಯಾಗಿದೆ.

ಪ್ರದೇಶವಾರು ಮಳೆ ಕೊರತೆಯ ಪ್ರಮಾಣ ಹೀಗಿದೆ:

  • ಉತ್ತರ ಒಳನಾಡು ಕರ್ನಾಟಕ – ಶೇ.31

  • ದಕ್ಷಿಣ ಒಳನಾಡು ಕರ್ನಾಟಕ – ಶೇ.41

  • ಮಲೆನಾಡು – ಶೇ.35

  • ಕರಾವಳಿ ಕರ್ನಾಟಕ – ಶೇ.24

ರಾಜ್ಯದ ಒಟ್ಟು 29 ಜಿಲ್ಲೆಗಳ ಪೈಕಿ 190 ತಾಲೂಕುಗಳು ‘ಕೊರತೆದಿಂದ ತೀವ್ರ ಕೊರತೆ’ ವಿಭಾಗಕ್ಕೆ ಸೇರಿವೆ. ಈ ಪೈಕಿ 12 ತಾಲೂಕುಗಳಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದೆ.

ಕೇಂದ್ರ ಸರ್ಕಾರದ ಬರ ನಿರ್ವಹಣಾ ಕೈಪಿಡಿ-2020ರ ಮಾರ್ಗಸೂಚಿಗಳನ್ವಯ ಸ್ಥಳ ಪರಿಶೀಲನೆ ಹಾಗೂ ಸಮಗ್ರ ಮೌಲ್ಯಮಾಪನ ನಡೆಸಿದ ಬಳಿಕ, 101 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಮತ್ತೊಂದು 12 ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಲಾಗಿದೆ.

Drought taluk karntaka
ಕೈಕೊಟ್ಟ ಮುಂಗಾರು: 28 ಕೋಟಿ ರೂ ವೆಚ್ಚದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್..!

ಪರಿಹಾರ ಕ್ರಮಗಳು

ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಆರ್ಥಿಕ ಹಾಗೂ ಭೌತಿಕ ಪರಿಹಾರ ಕ್ರಮಗಳನ್ನು ಕೈಗೊಂಡಿದೆ.

  • ಕುಡಿಯುವ ನೀರಿನ ಯೋಜನೆಗಳಿಗೆ ₹306 ಕೋಟಿ ಬಿಡುಗಡೆ

  • ಬೆಳೆ ವಿಮೆ ನೋಂದಣಿ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಣೆ

  • ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಿ ವಲಸೆ ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿ 66.73 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿ

ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕುಡಿಯುವ ನೀರು, ಕೃಷಿ ಹಾಗೂ ಗ್ರಾಮೀಣ ಉದ್ಯೋಗಕ್ಕೆ ಆದ್ಯತೆ ನೀಡಿ ಪರಿಹಾರ ಕ್ರಮಗಳನ್ನು ಮುಂದುವರಿಸಿದೆ.

ಜಲಾಶಯಗಳಲ್ಲಿ ನೀರಿನ ಕೊರತೆ & 131 ತಾಲೂಕುಗಳಲ್ಲಿ ಅಂತರ್ಜಲ ಕುಸಿತ

ಮಳೆ ಕೊರತೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಸಂಪೂರ್ಣ ಕ್ಷೀಣಿಸಿದ್ದು, ಪ್ರಸ್ತುತ ಕೇವಲ 684 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ರಾಜ್ಯದ 131 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ರಾಜ್ಯದ 2,021 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗುವ ಆತಂಕವಿದೆ. ರಾಜ್ಯದಲ್ಲಿ ಸದ್ಯ 151 ಲಕ್ಷ ಟನ್ ಮೇವು ಸಂಗ್ರಹವಿದ್ದು, ಇದು ಕೇವಲ 33 ವಾರಗಳಿಗೆ ಮಾತ್ರ ಸಾಕಾಗಲಿದೆ. 49 ತಾಲೂಕುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಕೇವಲ 20 ವಾರಗಳಿಗಿಂತ ಕಡಿಮೆ ಅವಧಿಯ ಮೇವು ಮಾತ್ರ ಲಭ್ಯವಿದೆ.

ಗೂಳೆ ಹೋಗುವುದನ್ನು ತಡೆಯಲು ಉದ್ಯೋಗ ಖಾತರಿ ಚುರುಕು

ಗ್ರಾಮೀಣ ಭಾಗದಲ್ಲಿ ಬರಗಾಲದಿಂದಾಗಿ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ (ಗೂಳೆ) ಹೋಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ತಡೆಯಲು ನರೇಗಾ (MGNREGA) ಯೋಜನೆಯಡಿ ಹೆಚ್ಚಿನ ಕೆಲಸ ಒದಗಿಸಲು ಸೂಚಿಸಲಾಗಿದೆ. ಜುಲೈನಿಂದ ಆಗಸ್ಟ್‌ ಅವಧಿಯಲ್ಲಿ ಈಗಾಗಲೇ 66.73 ಲಕ್ಷ ಮಾನವ ದಿನಗಳ (Man-days) ಉದ್ಯೋಗ ಕಲ್ಪಿಸಲಾಗಿದೆ.

ಬರ ನಿರ್ವಹಣೆಗೆ 635 ಕೋಟಿ ರೂಪಾಯಿ ಅನುದಾನ

ಬರ ಪರಿಹಾರ ಮತ್ತು ಮುನ್ನೆಚ್ಚರಿಕಾ ಕ್ರಮಗಳಿಗಾಗಿ ಸರ್ಕಾರ ವಿವಿಧ ಹಂತಗಳಲ್ಲಿ ಒಟ್ಟು ₹635 ಕೋಟಿ ಅನುದಾನ ಒದಗಿಸಿದೆ.

ಕುಡಿಯುವ ನೀರಿನ ಪೂರೈಕೆಗಾಗಿ: ಜಿಲ್ಲಾಧಿಕಾರಿಗಳಿಗೆ 117 ಕೋಟಿ ಬಿಡುಗಡೆ.

ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ: 189 ಕೋಟಿ ಹಂಚಿಕೆ.

ಡಿಸಿಗಳ ಪಿಡಿ (PD) ಖಾತೆಯಲ್ಲಿ: 329 ಕೋಟಿ ಅನುದಾನ ಲಭ್ಯ.

ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಕಿಟ್‌ಗಳನ್ನು ವಿತರಿಸಲಾಗುತ್ತಿದೆ.

ಕೇಂದ್ರದಿಂದ 1,239 ಕೋಟಿ ನೆರವಿಗೆ ಮನವಿ

15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ರಾಜ್ಯಕ್ಕೆ ಬರ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ಒಟ್ಟು 1,239 ಕೋಟಿ ರೂ ಅನುದಾನ ಬಿಡುಗಡೆಯಾಗಬೇಕಿದೆ. ಇದರಲ್ಲಿ ಮೊದಲ ಕಂತಾಗಿ ₹450 ಕೋಟಿ ತಕ್ಷಣವೇ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಸಮಗ್ರ ವರದಿ ಹಾಗೂ ಮನವಿ ಪತ್ರ ಸಲ್ಲಿಸಲಾಗುತ್ತಿದೆ. ಬರಗಾಲದ ಸಂಕಷ್ಟದಲ್ಲಿರುವ ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕಾಲಮಿತಿಯೊಳಗೆ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಸರ್ಕಾರ ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com