

ಹಾಲು ತುಂಬಿದ್ದ ಟ್ಯಾಂಕರ್ ಲಾರಿ ನಿಯಂತ್ರಣ ತಪ್ಪಿ ಉರುಳಿಬಿದ್ದು, ಸುಮಾರು 21 ಸಾವಿರ ಲೀಟರ್ ಹಾಲು ವ್ಯರ್ಥವಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಬೈಪಾಸ್‌ನಲ್ಲಿ ನಿನ್ನೆ ಗುರುವಾರ ಸಾಯಂಕಾಲ ನಡೆದಿದೆ.
ಸುಮಾರು 8 ಲಕ್ಷ ಮೌಲ್ಯದ 21 ಸಾವಿರ ಲೀಟರ್ ಹಾಲನ್ನು ಟ್ಯಾಂಕರ್‌ನಲ್ಲಿ ತುಂಬಿ ತುಮಕೂರಿನಿಂದ ಮುಂಬೈಗೆ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಅದೃಷ್ಟವಷಾತ್ ಲಾರಿ ಚಾಲಕ ಮತ್ತು ಕ್ಲೀನರ್‌ಗೆ ಯಾವುದೇ ಪ್ರಾಣಾಪಾಯವಾಗಿಲ್ಲ.
ಸ್ಥಳಕ್ಕೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಶಿರಾ ಉಪ ವಿಭಾಗದ ವ್ಯವಸ್ಥಾಪಕ ಗಿರೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾಲನ್ನು ತುಂಬಿಸಿಕೊಳ್ಳಲು ಮುಗಿಬಿದ್ದ ಜನ
ಹಾಲಿನ ಲಾರಿ ತುಮಕೂರು ಕಡೆಯಿಂದ ಮುಂಬೈಗೆ ತೆರಳಲು ಶಿರಾ ಬೈಪಾಸ್‌ನಲ್ಲಿ ಸಂಚರಿಸುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯಲ್ಲಿ ಉರುಳಿಬಿದ್ದಿದ್ದು, ಲಾರಿ ಪಲ್ಟಿಯಾಗುತ್ತಿದ್ದಂತೆ ಅದರಲ್ಲಿದ್ದ ಸಾವಿರಾರು ಲೀಟರ್ ಹಾಲು ರಸ್ತೆಯುದ್ದಕ್ಕೂ ಹರಿದಿದೆ. ಟ್ಯಾಂಕರ್ ಪಲ್ಟಿಯಾದ ವಿಷಯ ತಿಳಿದ ಜನರು ಪ್ಲಾಸ್ಟಿಕ್ ಬಾಟಲಿ ಹಾಗೂ ಕ್ಯಾನ್‌ಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಚೆಲ್ಲುತ್ತಿದ್ದ ಹಾಲನ್ನು ತುಂಬಿಸಿಕೊಳ್ಳಲು ಮುಗಿಬಿದ್ದಿರು. ಇದರಿಂದ ಹೆದ್ದಾರಿಯಲ್ಲಿ ಕೆಲಕಾಲ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.