

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಗಸ್ತು ತಂಡವು ಮಾಗಡಿ ರಸ್ತೆಯಲ್ಲಿ ಹಠಾತ್ ಹೃದಯಾಘಾತದಿಂದ ಬಳಲುತ್ತಿದ್ದ 34 ವರ್ಷದ ಬೈಕ್ ಸವಾರನಿಗೆ CPR ಮಾಡುವ ಮೂಲಕ ಜೀವವನ್ನು ಉಳಿಸಿದೆ.
ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಗ್ನಿಶಾಮಕ ಠಾಣೆಯ ಬಳಿ ಈ ಘಟನೆ ಸಂಭವಿಸಿದೆ. 34 ವರ್ಷದ ರವಿ ಎಂಬುವರು ಬೈಕ್ ನಲ್ಲಿ ಹೋಗುತ್ತಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಬೈಕ್ ಅನ್ನು ರಸ್ತೆ ಪಕ್ಕ ನಿಲ್ಲಿಸಿ ಕೆಳಗೆ ಕುಸಿದು ಬಿದ್ದಿದ್ದಾರೆ.
ಹೊಯ್ಸಳ-88 ವಾಹನದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ರವಿ ಕುಸಿದು ಬೀಳುತ್ತಿರುವುದನ್ನು ಗಮನಿಸಿದರು. ಪರಿಸ್ಥಿತಿಯ ತೀವ್ರತೆಯನ್ನು ಗುರುತಿಸಿದ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ASI) ಸಚ್ಚಿದಾನಂದಮೂರ್ತಿ ಮತ್ತು ಹೆಡ್ ಕಾನ್‌ಸ್ಟೆಬಲ್ ಬಸವರಾಜು ಸ್ಥಳಕ್ಕೆ ಧಾವಿಸಿ ತಕ್ಷಣ ಸಿಪಿಆರ್ ನೀಡಲು ಪ್ರಾರಂಭಿಸಿದರು. ಸಕಾಲಿಕ ನೆರವು ರವಿಯನ್ನು ಸ್ಥಿರಗೊಳಿಸಲು ಸಹಾಯ ಮಾಡಿತು. ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.