

ಬೆಂಗಳೂರು: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಉಳಿಸಿ ಆಂದೋಲನದ ಭಾಗವಾಗಿ ಮನ್ರೇಗಾ ರಕ್ಷಣಾ ಒಕ್ಕೂಟ- ಕರ್ನಾಟಕ ವತಿಯಿಂದ ಸೋಮವಾರ ಮಹಾ ಪಂಚಾಯತ್ ನಡೆಸಲಾಯಿತು.
ವಿಬಿಜಿ- ರಾಮ್ ಜಿ 2025 ಕಾನೂನನ್ನು ವಾಪಸ್ ಪಡೆಯಬೇಕು ಹಾಗೂ ನರೇಗಾ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮೀಣ ಭಾಗದ ಸಾವಿರಾರು ಜನರು ಸೇರಿದ್ದ ಮಹಾ ಪಂಚಾಯತ್ ಪ್ರತಿಭಟನೆಗೆ ಕಾರ್ಮಿಕ, ರೈತ, ದಲಿತ ಹಾಗೂ ಮಹಿಳಾ ಸಂಘಟನೆಗಳು ಕೈ ಜೋಡಿಸಿದ್ದವು. ರಾಜ್ಯದ ವಿವಿಧೆಡೆ ಆಗಮಿಸಿದ್ದ ಸಹಸ್ರಾರು ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ನರೇಗಾ ಯೋಜನೆಯು ಕಳೆದ ಎರಡು ದಶಕಗಳಿಂದ ದೇಶದ ಗ್ರಾಮೀಣ ಕೂಲಿಕಾರರು ಹಾಗೂ ಸಣ್ಣ ರೈತರ ಜೀವನೋಪಾಯಕ್ಕೆ ಆಧಾರವಾಗಿತ್ತು. ಅಂತಹ ಕಾನೂನನ್ನು ಕಿತ್ತು ಹಾಕಿರುವ ಕೇಂದ್ರ ಸರ್ಕಾರ, ಹೊಸದಾಗಿ ಜಾರಿಗೆ ತಂದಿರುವ 'ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜ್ ಗಾರ್ ಆಂಡ್ ಆಜೀವಿಕಾ ಮಿಷನ್( ಗ್ರಾಮೀಣ) ವಿಬಿ ಜಿ- ರಾಮ್- ಜಿ 2025 ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮನ್ರೇಗಾ ಯೋಜನೆಯಡಿ 26 ಕೋಟಿ ನೋಂದಾಯಿತ ಕಾರ್ಮಿಕರಿದ್ದಾರೆ. ಕರ್ನಾಟಕವೊಂದರಲ್ಲೇ 1.79 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಶೇ. 30 ರಷ್ಟು ಮಂದಿ ದಲಿತರು ಹಾಗೂ ಆದಿವಾಸಿಗಳಾಗಿದ್ದಾರೆ ಎಂದು ಮಹಾ ಪಂಚಾಯತ್ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಹೇಳಿದೆ.
ಗ್ರಾಮೀಣ ಜನರಿಗೆ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಉದ್ಯೋಗವನ್ನು ಒದಗಿಸುವ ಯೋಜನೆ ಪ್ರತಿ ವರ್ಷವೂ ಬಲವಾಗಿ ಬೆಳೆಯಬೇಕಿತ್ತು. ಬದಲಾಗಿ ಕಳೆದ 11 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಕಾನೂನನ್ನು ನಿರಂತರವಾಗಿ ದುರ್ಬಲಗೊಳಿಸಿದೆ. ಬಿಗಿಯಾದ ಕೇಂದ್ರದ ನಿಯಂತ್ರಣ, ಸಾಕಷ್ಟು ಹಣಕಾಸಿನ ಬೆಂಬಲವನ್ನು ನಿರಾಕರಣೆ ಪರಿಣಾಮವಾಗಿ ಸರಿಯಾದ ವೇಳೆಗೆ ವೇತನ ಸಿಗುತ್ತಿರಲಿಲ್ಲ. ಅತಿಯಾದ ಡಿಜಿಟಲೀಕರಣದಿಂದ ಕಾರ್ಮಿಕರಿಗೆ ಕೆಲಸ ಮಾಡಿದರೂ ವೇತನ ಸಿಗುತ್ತಿಲ್ಲ. ಕೋಟಿಗಟ್ಟಲೆ ಜಾಬ್ ಕಾರ್ಡ್ ಗಳು ಡಿಲೀಟ್ ಆಗಿವೆ. ಈ ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಕರ್ನಾಟಕದ ಲಕ್ಷಾಂತರ ಕುಟುಂಬಗಳಿಗೆ MGNREGA ಜೀವನಾಡಿಯಾಗಿ ಉಳಿದಿದೆ ಎಂದು ಹೇಳಿದೆ.
ಡಿಸೆಂಬರ್ 2025 ರಲ್ಲಿ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ, ಯಾವುದೇ ಪೂರ್ವ ಸಮಾಲೋಚನೆಯಿಲ್ಲದೆ MGNREGA ರದ್ದುಗೊಳಿಸಿದ್ದು, ಅದರ ಬದಲಿಗೆ VB-GRAM G ಎಂಬ ಹೊಸ ಕಾನೂನನ್ನು ಜಾರಿಗೆ ತಂದಿದೆ.ಈ ಹೊಸ ಕಾನೂನಿನಲ್ಲಿ ಮನ್ರೇಗಾದಲ್ಲಿನ ಯಾವುದೇ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಬದಲಿಗೆ ಭ್ರಷ್ಟಾಚಾರವನ್ನು ಹೆಚ್ಚಿಸುತ್ತದೆ ಎಂದು ಆರೋಪಿಸಿದೆ.
ಈ ಹೊಸ ಕಾನೂನು MGNREGA ಎದುರಿಸುತ್ತಿರುವ ಚಾಲ್ತಿಯಲ್ಲಿರುವ ಯಾವುದೇ ಸವಾಲುಗಳನ್ನು ಪರಿಹರಿಸುವುದಿಲ್ಲ. ಬದಲಿಗೆ, VB-GRAMG ಕಾಯಿದೆ ಭ್ರಷ್ಟಾಚಾರವನ್ನು ಹೆಚ್ಚಿಸುತ್ತದೆ. ಯಾವ ಕೆಲಸ ಕೈಗೊಳ್ಳಬೇಕು, ಎಲ್ಲಿ ಕಾಮಗಾರಿ ನಡಸಬೇಕು ಎಂಬುದನ್ನು ಈಗ ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ. ಮನ್ರೇಗಾದಡಿ ರಾಜ್ಯ ಸರ್ಕಾರಗಳು ಶೇ.10 ರಷ್ಟು ಮಾತ್ರ ಅನುದಾನ ನೀಡಬೇಕಿತ್ತು. ಆದರೆ ಹೊಸ ಕಾನೂನಿನಡಿ, ರಾಜ್ಯಗಳು ಶೇಕಡಾ 40 ರಷ್ಟು ಅನುದಾನ ನೀಡಬೇಕು. ಕೇಂದ್ರ ಸರ್ಕಾರ ಈಗಾಗಲೇ ಕರ್ನಾಟಕಕ್ಕೆ ದೊಡ್ಡ ಮೊತ್ತದ ಅನುದಾನ ನೀಡಬೇಕಿರುವಾಗ ಈ ಹೆಚ್ಚುವರಿ ಹೊರೆಯನ್ನು ಹೇರುವುದು ಅನ್ಯಾಯವಾಗಿದೆ ಎಂದು ಮಹಾ ಪಂಚಾಯತ್ ಹೇಳಿದೆ.
Advertisement