ಮ್ಯೂಲ್ ಅಕೌಂಟ್ ಸೈಬರ್ ದಂಧೆ: ರಾಜ್ಯಾದ್ಯಂತ CID ಏಕಕಾಲಕ್ಕೆ ದಾಳಿ, 13 ಮಂದಿ ಬಂಧನ
ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಮ್ಯೂಲ್ ಅಕೌಂಟ್‌ಗಳ (Mule Account) ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚನೆ (Cyber Fraud) ದಂಧೆಯನ್ನ ಸಿಐಡಿ ವಿಭಾಗ ಭೇದಿಸಿದೆ.
ಏಕಕಾಲಕ್ಕೆ ನೂರಾರು ಕಡೆ ದಾಳಿ (CID Raid) ನಡೆಸಿದ್ದ ಸಿಐಡಿ ತಂಡಗಳು, ಅಕ್ರಮಕ್ಕಾಗಿ ಬಳಸಲಾಗುತ್ತಿದ್ದ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನ ಪತ್ತೆ ಹಚ್ಚಿದೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದೆ.
ಅಮಾಯಕರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂದು ಸಿಐಡಿ ತಂಡ ತನಿಖೆ ವೇಳೆ ಬಹಿರಂಗಪಡಿಸಿದೆ.
ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು. ಖಾತೆ ವಿವರ ನೀಡಿದ ಅಮಾಯಕರಿಗೆ ವಂಚನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ. ತನಿಖೆಯ ವೇಳೆ ಸುಮಾರು 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳು ಬಳಕೆಯಲ್ಲಿರುವುದು ಪತ್ತೆಯಾಗಿದೆ.
ನೈಜ ಬ್ಯಾಂಕ್ ಖಾತೆದಾರರ ವಿಚಾರಣೆ: ಮೇಲಾಧಿಕಾರಿಗಳ ಸೂಚನೆಯಂತೆ, ಬೆಂಗಳೂರು, ಚಿತ್ರದುರ್ಗ, ಗದಗ, ಕೊಪ್ಪಳ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೈಜ ಬ್ಯಾಂಕ್ ಖಾತೆದಾರರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗಿದೆ.
ಮೊದಲ ಹಂತದಲ್ಲಿ 158 ಮ್ಯೂಲ್ ಖಾತೆದಾರರ ವಿವರಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಸೈಬರ್ ಅಪರಾಧ ದಿನೇ ದಿನೇ ಹೆಚ್ಚಾಗುತ್ತಿದೆ. ಅಮಾಯಕರ ಬ್ಯಾಂಕ್ ಖಾತೆಗಳಿಗೆ ಹಣ ನೀಡಿ, ಅವರಿಗೆ ತಿಳಿಯದೆ ಸೈಬರ್ ವಂಚಕರಿಗೆ ನೀಡುತ್ತಿರುವ ಬಗ್ಗೆ ಮುಂದಿನ ದಿನಗಳಲ್ಲಿ ಬಿಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಮ್ಯೂಲ್ ಅಕೌಂಟ್
ವಂಚನೆ ಮತ್ತು ಇತರ ಸೈಬರ್ ಅಪರಾಧಗಳಂತಹ ಕಾನೂನುಬಾಹಿರ ಚಟುವಟಿಕೆಗಳ ಮೂಲಕ ಪಡೆದ ಹಣವನ್ನು ಸಂಗ್ರಹಿಸಲು ಅಥವಾ ಹಣವನ್ನು ಕಳ್ಳಸಾಗಣೆ ಮಾಡಲು ಅಪರಾಧಿಗಳು ಬಳಸುವ ಬ್ಯಾಂಕ್ ಖಾತೆಗಳಿಗೆ ಮ್ಯೂಲ್ ಅಕೌಂಟ್ ಎನ್ನುತ್ತಾರೆ.

