

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗಳನ್ನು ನಡೆಸುವ ವೇಳೆ ಅಧಿಸೂಚಿತ ವಾರ್ಡ್ ಗಡಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸ್ಪಷ್ಟ ಸೂಚನೆ ನೀಡಿದ್ದಾರೆ.
ಸೋಮವಾರ ನಡೆದ ಸಭೆಯಲ್ಲಿ ಮತದಾರರ ಕರಡು ಪಟ್ಟಿ ಪರಿಶೀಲನೆಗೆ ಸಂಬಂಧಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಪ್ರಮಾಣಿತ ಕಾರ್ಯವಿಧಾನ) ಕುರಿತು ಚರ್ಚೆ ನಡೆಸಿದ ಅವರು, ವಾರ್ಡ್ ಗಡಿ ವಿವರಣೆಗಳಿಗೆ ಅನುಗುಣವಾಗಿ ಎಲ್ಲಾ ಕಾರ್ಯಗಳು ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಸೂಚನಾ ವಾರ್ಡ್ ವಿವರಣೆಗಳಿಗೆ ಅನುಗುಣವಾಗಿ ಗಡಿಗಳನ್ನು ಸರಿಪಡಿಸಿ, ದೀರ್ಘಾವಧಿಯಲ್ಲಿ ವ್ಯವಸ್ಥಿತ ಸರ್ವೆ ಮೂಲಕ ಪರಿಶೀಲನೆ ಕೈಗೊಳ್ಳುವಂತೆ ಐಟಿ ವಿಭಾಗದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಪ್ರತಿ ನಗರ ಪಾಲಿಕೆಯಲ್ಲಿ ಒಬ್ಬ ತಹಶೀಲ್ದಾರ್, ಒಬ್ಬ ವ್ಯವಸ್ಥಾಪಕ, ಒಬ್ಬ ಎಫ್‌ಡಿಎ, ಒಬ್ಬ ಎಸ್‌ಡಿಎ ಹಾಗೂ ಒಬ್ಬ ಡೇಟಾ ಎಂಟ್ರಿ ಆಪರೇಟರ್ ಹೊಂದಿರುವ ಚುನಾವಣಾ ವಿಭಾಗವನ್ನು ರಚಿಸುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದರು.
ಮತಗಟ್ಟೆಗಳ ಒಟ್ಟು ಸಂಖ್ಯೆ, ನಗರ ಪಾಲಿಕೆಗಳ ಒಳಗೆ ವಿಭಜಿತವಾದ ವಾರ್ಡ್‌ಗಳು ಹಾಗೂ ನಗರ ಪಾಲಿಕೆಗಳ ನಡುವೆ ವಿಭಜಿತವಾದ ವಾರ್ಡ್‌ಗಳಿಗೆ ಸಂಬಂಧಿಸಿದ ಡೇಟಾ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಹಾಗೂ ಜಿಬಿಎ ಚುನಾವಣಾ ವಿಭಾಗದೊಂದಿಗೆ ಸಮನ್ವಯ ಸಾಧಿಸಬೇಕು. ಇದಕ್ಕಾಗಿ ಐದು ನಗರ ಪಾಲಿಕೆಗಳಲ್ಲಿಯೂ ಕಂದಾಯದ ಹೆಚ್ಚುವರಿ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲು ಸೂಚಿಸಿದರು.
ಮತದಾರರ ಪಟ್ಟಿ ಮಾಹಿತಿಯ ಆಧಾರದ ಮೇಲೆ ಎಲ್ಲಾ ವಾರ್ಡ್‌ಗಳನ್ನು, ವಿಶೇಷವಾಗಿ ವಿಭಜಿತ ವಾರ್ಡ್‌ಗಳನ್ನು, ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕು. ವಿಭಜಿತ ವಾರ್ಡ್‌ಗಳಿಗೆ ಸಂಬಂಧಿಸಿದ ಮಾಹಿತಿಯ ನಿಖರತೆಯನ್ನು ನಗರ ಪಾಲಿಕೆ ಆಯುಕ್ತರು ಸ್ವತಂತ್ರವಾಗಿ ಪರಿಶೀಲಿಸಿ ದೃಢೀಕರಿಸುವಂತೆ ನಿರ್ದೇಶಿಸಿದರು.
Advertisement