

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಮತ್ತು ಕೊಂಬೆಗಳನ್ನು ತಕ್ಷಣ ತೆರವುಗೊಳಿಸುವಂದೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಖಡಕ್ ಸೂಚನೆ ನೀಡಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಅಗ್ನಿಶಾಮಕ ದಳ, ಬೆಂಗಳೂರು ಜಲಮಂಡಳಿ (BWSSB), ಬೆಸ್ಕಾಂ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಗುರುವಾರ ಸಭೆ ನಡೆಸಿದರು.
ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಸಂಚಾರ ಸಿಗ್ನಲ್‌ಗಳಿಗೆ ಅಡ್ಡಿಯಾಗುವ, ಪಾದಚಾರಿಗಳಿಗೆ ಅಪಾಯ ಉಂಟುಮಾಡುವ, ರಸ್ತೆಗೆ ವಾಲಿರುವ ಹಾಗೂ ಬೀದಿ ದೀಪಗಳನ್ನು ಮುಚ್ಚುವ ಮರದ ಕೊಂಬೆಗಳನ್ನು ತಕ್ಷಣ ಕತ್ತರಿಸಿ, ಬಿದ್ದಿರುವ ಮರದ ತುಂಡುಗಳನ್ನು ಶೀಘ್ರಗತಿಯಲ್ಲಿ ತೆರುವುಗೊಳಿಸಬೇಕೆಂದು ಸೂಚಿಸಿದರು.
‘ಮಾರ್ಕ್ಸ್’ ತಂತ್ರಾಂಶದ ಮೂಲಕ ರಸ್ತೆ ಕತ್ತರಿಸಲು ಸಲ್ಲಿಸಿರುವ ಅರ್ಜಿಗಳಿಗೆ ತಕ್ಷಣ ಅನುಮತಿ ನೀಡಬೇಕು. ನಂತರ ಸಂಬಂಧಿತ ಇಲಾಖೆಗಳು ರಸ್ತೆ ಕತ್ತರಿಸುವ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ರಸ್ತೆ ಪುನರ್ ನಿರ್ಮಾಣ ಕಾರ್ಯವನ್ನು ಗುಣಮಟ್ಟದೊಂದಿಗೆ ನಿರ್ವಹಿಸಬೇಕು ಎಂದು ಹೇಳಿದರು.
ಪಾದಚಾರಿ ಮೇಲ್ಸೇತುವೆಗಳ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಬೇಕು ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡಲು ಬಸ್ ನಿಲ್ದಾಣ ಸ್ಥಳಾಂತರಕ್ಕೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಮಳೆಗಾಲದ ಸಿದ್ಧತೆಗಾಗಿ ನಗರದಲ್ಲಿ ನೀರು ನಿಲ್ಲುವ ಪ್ರದೇಶಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಚಾರ ಪೊಲೀಸ್ ವಿಭಾಗವು ರಸ್ತೆಗಳಲ್ಲಿ ಮಳೆನೀರು ನಿಲ್ಲುವ ಸ್ಥಳಗಳ ಪಟ್ಟಿಯನ್ನು ಸಲ್ಲಿಸಿದ್ದು, ಅದರನ್ವಯ ಸ್ಥಳ ಪರಿಶೀಲನೆ ನಡೆಸಬೇಕು. ಮುಂಗಾರು ಮಳೆ ಪ್ರಾರಂಭವಾಗುವ ಮುನ್ನವೇ ಎಲ್ಲಾ ಪ್ರದೇಶಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಮಳೆನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ‘ಅನಾಥ ವಾಹನಗಳ’ ಟೋಯಿಂಗ್ ಕಾರ್ಯಾಚರಣೆ ಆರಂಭಿಸುವುದು, ಕೆ-100 ನಾಲೆಗೆ ಒಳಚರಂಡಿ ನೀರು ಸೇರುವುದನ್ನು ತಡೆಯುವುದು, ಮೆಟ್ರೋ ನಿಲ್ದಾಣಗಳ ಸುತ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಹಾಗೂ ವೈಟ್‌ಟಾಪಿಂಗ್ ರಸ್ತೆ ಕಾಮಗಾರಿಗಳನ್ನು ವೇಗಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
Advertisement