

ಬೆಂಗಳೂರು: ಡಂಪಿಂಗ್ ಯಾರ್ಡ್ ಗಳ ಅಸಮರ್ಪಕ ನಿರ್ವಹಣೆ, ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಶುಲ್ಕ ಪಾವತಿಸಿದ ಹಿನ್ನೆಲೆಯಲ್ಲಿ ನಗರ ಹೊರವಲಯದ ಬೆಳ್ಳಹಳ್ಳಿ ಮತ್ತು ಮಿಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್ ಗಳಲ್ಲಿ ಕಸ ಡಂಪ್ ಮಾಡಲು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ನಗರದಲ್ಲಿ ಮತ್ತೆ ಕಸದ ಸಂಕಷ್ಟ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ.
ಬೆಳ್ಳಹಳ್ಳಿ ಡಂಪ್‌ಯಾರ್ಡ್ ಪ್ರದೇಶದ ಗ್ರಾಮಸ್ಥರು ಸುಮಾರು 250 ಕಸದ ಕಂಪ್ಯಾಕ್ಟರ್ ಲಾರಿಗಳಿಗೆ ದಿಗ್ಬಂಧನ ಹಾಕಿದ್ದು, ತಮ್ಮ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೊಗಿಲು ಕ್ರಾಸ್ ನಿವಾಸಿ ಹೇಮಂತ್ ಕುಮಾರ್ ಮಾತನಾಡಿ, ಕಳೆದ 12 ವರ್ಷಗಳಿಂದ ಬೇಳ್ಳಹಳ್ಳಿ, ಕನ್ನೂರು ಹಾಗೂ ಮಿಟ್ಟಗಾನಹಳ್ಳಿ ವ್ಯಾಪ್ತಿಯ ದೊಡ್ಡ ಕ್ವಾರಿ ಗುಂಡಿಯಲ್ಲಿ ಕಸ ಸುರಿಯಲಾಗುತ್ತಿದೆ. ಆದರೆ. ರಸ್ತೆ, ಕುಡಿಯುವ ನೀರು, ಕೆರೆ ಅಭಿವೃದ್ಧಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಲಾಗಿಲ್ಲ. ಬೆಂಗಳೂರನ್ನು ಸ್ವಚ್ಛವಾಗಿಡಲು ನಮ್ಮ ಗ್ರಾಮಸ್ಥರನ್ನು ಬಲಿಕೊಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಗ್ರಾಮಸ್ಥರು ದಿನಕ್ಕೆ 75 ಲಾರಿಗಳ ಕಸ ಸುರಿಯಲು ಮಾತ್ರ ಒಪ್ಪಿಕೊಂಡಿದ್ದರು. ಆದರೆ, ಈಗ 200ಕ್ಕೂ ಹೆಚ್ಚು ಲಾರಿಗಳು ಬರುತ್ತಿವೆ. ಇದರಿಂದ ಭೂಗರ್ಭ ಜಲ ಮತ್ತು ಗಾಳಿಯ ತೀವ್ರ ಮಾಲಿನ್ಯ ಉಂಟಾಗಿದ್ದು, ಪರಿಸರ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಹಾದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಣ್ಣೂರು, ಗುಬ್ಬಿ ಹಾಗೂ ಬಿದರಹಳ್ಳಿ ಪ್ರದೇಶಗಳಲ್ಲೂ ನೀರಿನ ಮಾಲಿನ್ಯ ಸಮಸ್ಯೆ ತೀವ್ರವಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎ. ನಾರಾಯಣಸ್ವಾಮಿ ಅವರು ಹೇಳಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು, ಎರಡು ದಿನಗಳಲ್ಲಿ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳ ತಂಡ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಹೇಳಿದ್ದಾರೆ.
ಗ್ರಾಮಸ್ಥರು ತಮ್ಮ ಪ್ರದೇಶದಲ್ಲಿ ಅಭಿವೃದ್ಧಿಗಾಗಿ ಒತ್ತಾಯಿಸುತ್ತಿದ್ದಾರೆ, ಸಾಕಷ್ಟು ಹಣವನ್ನು ಕೋರಿದ್ದಾರೆ. ಹಣವನ್ನು ಬಿಡುಗಡೆ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
Advertisement