ನೈಸರ್ಗಿಕ ದಂತ ಆರೈಕೆ: KSDLನಿಂದ ಹೊಸ ಸಂಶೋಧನೆ, sandalwood ಟೂತ್‌ಪೇಸ್ಟ್ ಶೀಘ್ರದಲ್ಲೇ ಮಾರುಕಟ್ಟೆಗೆ..!

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಶ್ರೀಗಂಧದ (ಸ್ಯಾಂಡಲ್ವುಡ್) (ಚಂದನ) ಆಧಾರಿತ ಟೂತ್‌ಪೇಸ್ಟ್ ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸುತ್ತಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಮಾನವನ ದಿನಚರಿಯಲ್ಲಿ ಟೂತ್‌ಪೇಸ್ಟ್ ಬಹುಮುಖ್ಯವಾಗಿ ಹೋಗಿದ್ದು, ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದು ದಿನಚರಿ ಆರಂಭವಾಗುತ್ತದೆ. ಹಲ್ಲುಗಳ ಬಲವರ್ಧನೆ, ಹೊಳಪು, ಸಂವೇದನಾಶೀಲ ಹಲ್ಲು ಮತ್ತು ವಸಡಿನ ಸಮಸ್ಯೆಗಳ ಆರೈಕೆಗಾಗಿ ಅನೇಕ ಕಂಪನಿಗಳು ವಿಭಿನ್ನ ಟೂತ್‌ಪೇಸ್ಟ್‌ಗಳನ್ನು ಮಾರುಕಟ್ಟೆಗೆ ತಂದಿವೆ.

ರಾಸಾಯನಿಕ ಸಂಯೋಜನೆಗಳ ಜೊತೆಗೆ ಬೇವು, ಉಪ್ಪು, ಚಾರ್ಕೋಲ್ ಮುಂತಾದ ನೈಸರ್ಗಿಕ ಪದಾರ್ಥಗಳ ಬಳಕೆ ಕೂಡ ಹೆಚ್ಚಾಗಿದೆ.

ಈ ಪ್ರವೃತ್ತಿಗೆ ಹೊಸ ಆಯಾಮ ನೀಡುವ ಪ್ರಯತ್ನವಾಗಿ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಶ್ರೀಗಂಧದ (ಸ್ಯಾಂಡಲ್ವುಡ್) (ಚಂದನ) ಆಧಾರಿತ ಟೂತ್‌ಪೇಸ್ಟ್ ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸುತ್ತಿದೆ.

ಈ ಸಂಶೋಧನೆ ಯಶಸ್ವಿಯಾಗಿದ್ದೇ ಆದರೆ, ಕರ್ನಾಟಕದ ಪ್ರಸಿದ್ಧ ಶ್ರೀಗಂಧದ (ಚಂದನ) ಸೌಂದರ್ಯ ಉತ್ಪನ್ನಗಳಷ್ಟೇ ಅಲ್ಲ, ದಂತ ಆರೋಗ್ಯ ಕ್ಷೇತ್ರದಲ್ಲೂ ಮಹತ್ವದ ಪಾತ್ರ ವಹಿಸಲಿದೆ.

ಶ್ರೀಗಂಧವು ಭಾರತದ ಸಂಸ್ಕೃತಿ ಮತ್ತು ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಪ್ರಾಚೀನ ಕಾಲದಿಂದಲೂ ಶ್ರೀಗಂಧವನ್ನು ಶೀತಕಾರಿ, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಕ ಪದಾರ್ಥವಾಗಿ ಬಳಸಲಾಗುತ್ತಿದೆ.

KSDL ಸಂಶೋಧಕರ ಪ್ರಕಾರ, ಚಂದನದಲ್ಲಿ ಹಲ್ಲುಗಳ ವಸಡಿಗೆ ಆರೈಕೆ ನೀಡುವ, ಬಾಯಿ ಹುಣ್ಣು, ರಕ್ತಸ್ರಾವ ಸಮಸ್ಯೆಗಳನ್ನು ಕಡಿಮೆ ಮಾಡುವ, ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಆಂಟಿ-ಮೈಕ್ರೋಬಿಯಲ್ ಗುಣ, ಉರಿಯೂತವನ್ನು ತಗ್ಗಿಸುವ ಆಂಟಿ-ಇನ್‌ಫ್ಲಮೇಟರಿ ಗುಣ ಹಾಗೂ ಬಾಯಿಗೆ ನೈಸರ್ಗಿಕ ತಾಜಾ ವಾಸನೆ ನೀಡವ ಗುಣವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

File photo
KSDL ಐತಿಹಾಸಿಕ ಸಾಧನೆ: ಸರ್ಕಾರಕ್ಕೆ 135 ಕೋಟಿ ರೂ ಡಿವಿಡೆಂಡ್ ಹಸ್ತಾಂತರ!

ಸರಿಯಾದ ಪ್ರಮಾಣದಲ್ಲಿ ಸಂಸ್ಕರಿಸಿದ ಶ್ರೀಗಂಧದ ಎಣ್ಣೆಯನ್ನು ವೈದ್ಯಕೀಯ ಮಾರ್ಗದರ್ಶನದೊಂದಿಗೆ ಬಳಸಿದರೆ ಔಷಧೀಯ ಪ್ರಯೋಜನಗಳು ದೊರೆಯುತ್ತವೆ ಎಂದು ಹೇಳಿದ್ದಾರೆ.

ಇಷ್ಟೊಂದು ಗುಣವನ್ನು ಹೊಂದಿರುವ ಶ್ರೀಗಂಧವನ್ನು ದೈನಂದಿನ ಬಳಕೆಯ ಟೂತ್‌ಪೇಸ್ಟ್‌ನಲ್ಲಿ ಬಳಸುವುದು ಸರಳ ವಿಷಯವಲ್ಲ. ಅದರ ಪ್ರಮಾಣ, ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ದೀರ್ಘಕಾಲೀನ ಸ್ಥಿರತೆ—ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು KSDL ವಿಜ್ಞಾನಿಗಳು ಹಲವು ಸಂಯೋಜನೆಗಳ ಮೇಲೆ ಪ್ರಯೋಗ ನಡೆಸುತ್ತಿದ್ದಾರೆ.

KSDL ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿಕೆಎಂ ಅವರು ಮಾತನಾಡಿ, ಚಂದನವು ಕೇವಲ ಸುಗಂಧ ಮತ್ತು ಆರ್ಥಿಕ ಮೌಲ್ಯಕ್ಕೆ ಸೀಮಿತವಲ್ಲ. ಪ್ರಾಚೀನ ಕಾಲದಿಂದಲೇ ಇದು ವಿಶಿಷ್ಟ ಸ್ಥಾನ ಪಡೆದಿದೆ. ನಮ್ಮ ಸಂಸ್ಥೆ ಈಗಾಗಲೇ ಹಲವು ಚಂದನ ಆಧಾರಿತ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಇನ್ನಷ್ಟು ಸಂಶೋಧನೆ ಮುಂದುವರಿದಿದೆ ಎಂದು ಹೇಳಿದ್ದಾರೆ.

KSDL ಸಂಶೋಧನೆಯ ವ್ಯಾಪ್ತಿ ದಂತ ಆರೋಗ್ಯಕ್ಕೆ ಮಾತ್ರ ಸೀಮಿತವಿಲ್ಲ. ಚಂದನ ಆಧಾರಿತ ಹೇರ್ ಆಯಿಲ್ ಅಭಿವೃದ್ಧಿಯೂ ಪ್ರಗತಿಯಲ್ಲಿ ಇದೆ. ಚಂದನವು ಕೂದಲು ಉದುರುವಿಕೆ, ಡ್ಯಾಂಡ್ರಫ್ ಸಮಸ್ಯೆ ಮತ್ತು ತಲೆಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಕಾರಿ ಎಂದು ಸಂಶೋಧಕರು ಹೇಳುತ್ತಾರೆ. ಅದರ ಆಂಟಿಸೆಪ್ಟಿಕ್ ಗುಣಗಳು ತಲೆಚರ್ಮವನ್ನು ಆರೋಗ್ಯಕರವಾಗಿಡಲು ನೆರವಾಗುತ್ತವೆ. ಜೊತೆಗೆ ಮನಸ್ಸನ್ನು ಶಾಂತಗೊಳಿಸುವ ಗುಣವೂ ಇದರಲ್ಲಿ ಇದೆ ಎಂದು ತಿಳಿಸಿದ್ದಾರೆ.

ಆಯುಷ್ ಆಯುಕ್ತ ಸುನಿಲ್ ಪಾನ್ವಾರ್ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರು ರಾಸಾಯನಿಕ ಉತ್ಪನ್ನಗಳ ಬದಲು ಹರ್ಬಲ್ ಮತ್ತು ನೈಸರ್ಗಿಕ ಉತ್ಪನ್ನಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಬೇವು, ತುಳಸಿ ಮುಂತಾದ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

KSDL ಸಂಸ್ಥೆ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಧೂಪದ್ರವ್ಯದ ಕಡ್ಡಿಗಳ ಮೂಲಕ ದೇಶ-ವಿದೇಶಗಳಲ್ಲಿ ಖ್ಯಾತಿಯಾಗಿದೆ. ಈಗ ಕಾಸ್ಮೆಟಿಕ್ಸ್, ಡಿಟರ್ಜೆಂಟ್ಸ್, ಹ್ಯಾಂಡ್ ವಾಶ್ ಮತ್ತು ಗೃಹೋಪಯೋಗಿ ಉತ್ಪನ್ನಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.

ಚಂದನ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಸ್ಥೆ ಚಂದನ ಸಾಮೂಹಿಕ ಬಳಕೆ ಯೋಜನೆಗೂ ವೇಗ ನೀಡಿದೆ. ಅರಣ್ಯ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಶ್ರೀಗಂಧ ಮರಗಳ ಬೆಳೆಯುವುದು ಮತ್ತು ಸಂರಕ್ಷಣೆಗೆ ಕ್ರಮ ಕೈಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com