News Wrap 26-02-26 | ಮಲ್ಲಿಕಾರ್ಜುನ ಮುತ್ಯಾ ವಿರುದ್ಧ Pocso ಕೇಸ್; ನಟಿ ರನ್ಯಾ ರಾವ್ ವಿರುದ್ಧ ಚಾರ್ಜ್‌ಶೀಟ್; ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ!

News Wrap 26-02-26 | ಮಲ್ಲಿಕಾರ್ಜುನ ಮುತ್ಯಾ ವಿರುದ್ಧ Pocso ಕೇಸ್; ನಟಿ ರನ್ಯಾ ರಾವ್ ವಿರುದ್ಧ ಚಾರ್ಜ್‌ಶೀಟ್; ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ!

1. ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯ ವರ್ತನೆ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ Pocso ಪ್ರಕರಣ

ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಏಳು ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಮುತ್ಯಾ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ ವಿಡಿಯೋ ವೈರಲ್ ಆಗಿತ್ತು. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿಗೆ ಆಯೋಗ ಪತ್ರ ಬರೆದಿತ್ತು. ಇನ್ನು ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಮಲ್ಲಿಕಾರ್ಜುನ​ ಮುತ್ಯಾ ತಲೆಮರೆಸಿಕೊಂಡಿದ್ದು ಅಜ್ಞಾತ ಸ್ಥಳದಿಂದ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಪೊಲೀಸರು ವಿಚಾರಣೆಗೆ ಕರೆದಾಗ ಹೋಗುತ್ತೇನೆ. ಈ ವಿಷಯದ ಬಗ್ಗೆ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

2. ಬೆಂಗಳೂರಿನಲ್ಲಿ ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಬಂಧಿಸಿದ Kerala Police

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದ ರಮೇಶ್ ರೆಡ್ಡಿ ಬಡಾವಣೆಯಲ್ಲಿ ನೆಲೆಸಿದ್ದ ಅಂತಾರಾಜ್ಯ ಗಾಂಜಾ ಪೆಡ್ಲರ್ ನ ಮನೆ ಮೇಲೆ ದಾಳಿ ಮಾಡಿದ್ದ ಕೇರಳ ಪೊಲೀಸರು ಅಸ್ಸಾಂ ಮೂಲದ ಪೆಡ್ಲರ್ ಧೀರೇಶ್ ಕುಟುಮ್ ಎಂಬಾತನನ್ನು ಬಂಧಿಸಿದ್ದಾರೆ. ಕೇರಳದ ಮಾದಕವಸ್ತು ನಿಗ್ರಹ ದಳ ಕಾರ್ಯಾಚರಣೆ ನಡೆಸಿ 1 ಕೋಟಿ ರೂ ಮೌಲ್ಯದ MDMA ಡ್ರಗ್ಸ್ ವಶಕ್ಕೆ ಪಡೆದು 9 ಆರೋಪಿಗಳನ್ನು ಬಂಧಿಸಿದ್ದಾರೆ. ಧೀರೇಶ್ ಕುಟುಮ್ ತನ್ನ ಸಹೋದರಿ ಪತಿ ನೈಜೀರಿಯಾ ಮೂಲದ ವ್ಯಕ್ತಿ ಮೂಲಕ ಕೇರಳ ಮತ್ತು ಕರ್ನಾಟಕಕ್ಕೆ ಸಾಗಟ ಮಾಡಲಾಗುತ್ತಿತ್ತು. ಇಲ್ಲಿ ಸೆರೆಲಾಕ್ ಪಾಕೆಟ್​ಗಳಲ್ಲಿ ಆನ್​ಲೈನ್ ಫುಡ್ ಡೆಲಿವರಿ ಬಾಯ್​ ರೀತಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕೇರಳ ಪೊಲೀಸರು ದಾಳಿ ಮಾಡಿ 15ಕ್ಕೂ ಹೆಚ್ಚು ಖಾಲಿ ಸೆರೆಲಾಕ್ ಪಾಕೆಟ್​ಗಳು ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

3. ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ; ತಂದೆ-ಮಗನ ಬಂಧನ

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರು ಹೊರವಲಯದ ಅತ್ತಾವರ ಬಾಬುಗುಡ್ಡೆ ಬಳಿ ರೈಲ್ವೆ ಹಳಿಯಲ್ಲಿ ಕುಳಿತಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅವಾಚ್ಯವಾಗಿ ನಿಂದಿನಿ, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪದ ಮೇಲೆ ತಂದೆ ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ವಿರುದ್ದ ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೇವಲ ಹಲ್ಲೆಯಷ್ಟೇ ಅಲ್ಲದೆ, ವಿದ್ಯಾರ್ಥಿಗಳ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ವಿದ್ಯಾರ್ಥಿಗಳ ಮಾನಹಾನಿಗೆ ಯತ್ನಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರ ವಿರುದ್ಧ BNS ಸೆಕ್ಷನ್ 176ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

4. ಬೆಳಗಾವಿ: ಅಂಗನವಾಡಿಗಳಲ್ಲಿ ಅವಧಿ ಮೀರಿದ ಪೌಷ್ಟಿಕ ಆಹಾರ ವಿತರಣೆ; ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಬೆಳಗಾವಿಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಅವಧಿ ಮೀರಿದ ಪೌಷ್ಟಿಕ ಆಹಾರ ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಮಕ್ಕಳ ಪೌಷ್ಟಿಕಾಂಶ ಕಾರ್ಯಕ್ರಮಗಳ ಸುರಕ್ಷತೆ ಮತ್ತು ಮೇಲ್ವಿಚಾರಣೆಯ ಬಗ್ಗೆ ಕಳವಳ ವ್ಯಕ್ತವಾಗುವಂತೆ ಮಾಡಿದೆ. ಕನ್ನಡ ಹೋರಾಟಗಾರ್ತಿ ಕಸ್ತೂರಿ ಬಾವಿ ಎಂಬುವರು ಸ್ಥಳೀಯ ಯುವಕರೊಂದಿಗೆ ಗ್ರಾಮದಲ್ಲಿನ ಮೂರು ಅಂಗನವಾಡಿ ಕೇಂದ್ರಗಳ ಆಹಾರ ಸಂಗ್ರಹವನ್ನು ಪರಿಶೀಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪರಿಶೀಲನೆ ವೇಳೆ ಮೂರುರಿಂದ ಆರು ತಿಂಗಳ ಹಿಂದೆಯೇ ಅವಧಿ ಮುಗಿದ ಆಹಾರ ವಸ್ತುಗಳನ್ನು ಮಕ್ಕಳಿಗೆ ವಿತರಿಸುತ್ತಿರುವುದು ಪತ್ತೆಯಾಗಿತ್ತು. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಆರೋಪಗಳನ್ನು ತಳ್ಳಿ ಹಾಕಿದ್ದು, ಫೆಬ್ರವರಿ 7ರಂದು ನಡೆದ ಪರಿಶೀಲನೆಯಲ್ಲಿ ಅವಧಿ ಮೀರಿದ ಆಹಾರ ಪ್ಯಾಕೆಟ್‌ಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ವೈರಲ್ ವಿಡಿಯೋಗಳು ತಪ್ಪು ಮಾಹಿತಿಗಳನ್ನು ಹರಡುತ್ತಿದ್ದು, ಇದೊಂದು ಪಿತೂರಿಯಾಗಿದೆ ಎಂದು ಹೇಳಿದ್ದಾರೆ.

5. ನಟಿ ರನ್ಯಾ ರಾವ್ ವಿರುದ್ಧ ED ಚಾರ್ಚ್ ಶೀಟ್

ಕನ್ನಡ ನಟಿ ರನ್ಯಾ ರಾವ್ ಹಾಗೂ ಇಬ್ಬರು ಸಹಚರರ ವಿರುದ್ಧ ಚಿನ್ನ ಕಳ್ಳಸಾಗಣೆ ಮತ್ತು ಹಣಕಾಸು ಅಕ್ರಮ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ಸಲ್ಲಿಸಿದೆ. ಮಾರ್ಚ್ 2024ರಿಂದ ಮಾರ್ಚ್ 2025ರವರೆಗೆ ಸುಮಾರು 102 ಕೋಟಿ ಮೌಲ್ಯದ 127 ಕೆಜಿ ವಿದೇಶೀ ಮೂಲದ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದೆ. ಈ ಚಿನ್ನವನ್ನು ದೇಶೀಯ ಮಾರುಕಟ್ಟೆಯಲ್ಲಿ ವಿತರಿಸಿ, ನಗದು ರೂಪದಲ್ಲಿ ಪಡೆದ ಹಣವನ್ನು ಹವಾಲಾ ಮಾರ್ಗ ಹಾಗೂ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಕಾನೂನುಬದ್ಧ ವ್ಯವಹಾರಗಳಂತೆ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇಡಿ ಸದ್ಯ ರನ್ಯಾ ಹೆಸರಿನಲ್ಲಿರುವ ರೂ.34.12 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com