ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಮುಷ್ಕರಕ್ಕೆ ಆರೋಗ್ಯ ಸಿಬ್ಬಂದಿ ಮುಂದು, ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ಸರ್ಕಾರ

ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಸಾರ್ವಜನಿಕ ಆರೋಗ್ಯ ಸೇವೆಯ ನಿರಂತರತೆ ಮತ್ತು ರೋಗಿಗಳ ಆರೋಗ್ಯ ಕಾಪಾಡುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಸಾಮೂಹಿಕ ಮುಷ್ಕರದಂತಹ ಕ್ರಮಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಡ್ತಿಯಲ್ಲಿ ವಿಳಂಬ, ಸಿಬ್ಬಂದಿ ಕೊರತೆ, ಔಷಧ ಪೂರೈಕೆ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆರೋಗ್ಯ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾಗಿದ್ದು, ಕರ್ತವ್ಯದ ಅವಧಿಯಲ್ಲಿ ಗೈರಾಗಿ ಸಾಮೂಹಿಕ ಮುಷ್ಕರ ಕೈಗೊಂಡಲ್ಲಿ ಕಾನೂನಿನ ಅಡಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಕರ್ನಾಟಕ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ (ಕೆಜಿಎಎಂಎ), ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ (ಕೆಎಸ್‌ಎಹೆಚ್‌ಎ) ಮತ್ತು ಇತರ ಸಿಬ್ಬಂದಿ ಸಂಸ್ಥೆಗಳು ಸರ್ಕಾರದ ವಿರುದ್ದ ಕಿಡಿಕಾರಿವೆ.

ವರ್ಷಗಳಿಂದ ಬಡ್ತಿಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದಾಗಿ ಕೆಲವರು ವೃತ್ತಿ ಪ್ರಗತಿಯಿಲ್ಲದೆ ನಿವೃತ್ತರಾಗುವಂತಾಗಿದೆ. ಹಲವು ಹುದ್ದೆಗಳು ಖಾಲಿಯಿದ್ದು, ಇದರಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಹೊರೆ ಹೆಚ್ಚಾಗುವಂತೆ ಮಾಡಿದೆ ಎಂದು ಸರ್ಕಾರಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಪ್ರತಿನಿಧಿಸುವ ಸಂಘಗಳು ಆರೋಪಿಸಿವೆ.

ಇದಲ್ಲದೆ, ಅಗತ್ಯ ಔಷಧಿಗಳ ಸರಬರಾಜು ಆಗುತ್ತಿಲ್ಲ. ಕೆಲವು ಆಸ್ಪತ್ರೆಗಳು ತಾತ್ಕಾಲಿಕ ನಿಧಿಯಿಂದ ಔಷಧಿ ಖರೀದಿಸುವಂತಾಗುತ್ತಿದೆ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಬಾಕಿ ಪಾವತಿಗಳು ವಿಳಂಬವಾಗಿವೆ ಎಂದು ತಿಳಿಸಿದ್ದಾರೆ.

ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಪಗಳನ್ನು ತಳ್ಳಿ ಹಾಕಿದ್ದು, ಜಿಲ್ಲಾಮಟ್ಟದ ಪರಿಶೀಲನಾ ಸಭೆಗಳಲ್ಲಿ ಔಷಧಿ ಕೊರತೆ ವರದಿಯಾಗಿಲ್ಲವೆಂದು ಸ್ಪಷ್ಟಪಡಿಸಿದೆ.

File photo
ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ; 26 ತಿಂಗಳ ಅರಿಯರ್ಸ್, ವೇತನ ಪರಿಷ್ಕರಣೆಗೆ ಒಪ್ಪಿಗೆ; ರದ್ದಾಗುತ್ತಾ ಮುಷ್ಕರ?

ಕೆಲವು ಪ್ರದೇಶಗಳಲ್ಲಿನ ಅಡಚಣೆಗಳಿಗೆ ಬಿಲ್ಲಿಂಗ್ ವಿಳಂಬ, ಅನುಚಿತ ಖರೀದಿ ಪದ್ಧತಿಗಳು ಮತ್ತು ಇ-ಔಷಧಿ ವ್ಯವಸ್ಥೆಯಲ್ಲಿನ ಸ್ಟಾಕ್ ವಿವರಗಳನ್ನು ನವೀಕರಿಸದಿರುವುದು ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

ಸಿಬ್ಬಂದಿ ನೇಮಕಾತಿ ಸಮಸ್ಯೆಗಳ ಕುರಿತು ಮಾಹಿತಿ ನೀಡಿ, ಖಾಲಿ ಹುದ್ದೆಗಳಿರುವುದು ನಿಜ. ಆದರೆ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಗ್ರಾಮೀಣ ಆರೋಗ್ಯ ಸೇವೆಗಳನ್ನು ಬಲಪಡಿಸಲು ನೇಮಕಾತಿ, ಹೊರಗುತ್ತಿಗೆ ಮತ್ತು ಮರು ನಿಯೋಜನೆ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ಹೇಳಿದೆ. ಇದೇ ವೇಳೆ ಮುಷ್ಕರಕ್ಕೆ ಮುಂದಾಗಿರುವ ಸಿಬ್ಬಂದಿಗಳಿಗೂ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ.

ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಸಾರ್ವಜನಿಕ ಆರೋಗ್ಯ ಸೇವೆಯ ನಿರಂತರತೆ ಮತ್ತು ರೋಗಿಗಳ ಆರೋಗ್ಯ ಕಾಪಾಡುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಸಾಮೂಹಿಕ ಮುಷ್ಕರದಂತಹ ಕ್ರಮಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿದೆ. ಆದ್ದರಿಂದ ಮುಷ್ಕರದಿಂದ ಹಿಂದೆ ಸರಿದು ಕರ್ತವ್ಯ ನಿರ್ವಹಿಸಬೇಕಿದೆ. ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಕಾನೂನಿನಡಿ ಲಭ್ಯವಿರುವ ಮಾರ್ಗಗಳನ್ನು ಬಳಸಿ, ಬಗೆಹರಿಸಿಕೊಳ್ಳಬೇಕು. ವೈದ್ಯರು ಹಾಗೂ ಸಿಬ್ಬಂದಿ ಮುಷ್ಕರದ ನಿಮಿತ್ತ ಕೆಲಸಕ್ಕೆ ಗೈರಾದಲ್ಲಿ, ಸಾರ್ವಜನಿಕರಿಗೆ ತೊಂದರೆಯಾದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com