

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA)ಯನ್ನು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಗೆ ಒಳಪಡಿಸುವುದು ಅಥವಾ ಬೆಂಗಳೂರು ದಕ್ಷಿಣ ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಸೇರಿಸುವ ಸಾಧ್ಯತೆಗಳ ಕುರಿತು ಚರ್ಚೆಗಳು ಆರಂಭವಾಗಿವೆ.
ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಪ್ರಾಧಿಕಾರ (ELCITA)ದ ಆಸ್ತಿ ತೆರಿಗೆ ಸಂಗ್ರಹದ ವಿವರಗಳನ್ನು ಹಂಚಿಕೊಳ್ಳುವಂತೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು, ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿರುವುದು ಈ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಇದಷ್ಟೇ ಅಲ್ಲದೆ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಸಂಗ್ರಹಿಸುವ ನಿಧಿಗಳನ್ನು ಸುತ್ತಮುತ್ತಲಿನ ಪಂಚಾಯತ್‌ಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆಯೇ ಎಂಬುದರ ಕುರಿತಂತೆಯೂ ಪರಿಶೀಲಿಸಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ಅಲಿ ಆಸ್ಕರ್ ರಸ್ತೆಯಲ್ಲಿರುವ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (BMRDA) ಕಚೇರಿಯಲ್ಲಿ ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಅನೇಕಲ್, ಬೊಮ್ಮಸಂದ್ರ, ಹುಣಸಮಾರನಹಳ್ಳಿ, ಚಿಕ್ಕಬಾಣಾವರ, ಚಂದಾಪುರ ಮತ್ತು ಜಿಗಣಿ ಪಟ್ಟಣಸಭೆಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದು, ತಮ್ಮ ವ್ಯಾಪ್ತಿಯ ಅಭಿವೃದ್ಧಿ ಚಟುವಟಿಕೆಗಳು ಮತ್ತು ಆದಾಯ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.
ವಾರ್ಷಿಕವಾಗಿ ಸುಮಾರು 29 ಕೋಟಿ ರೂ.ತೆರಿಗೆ ಸಂಗ್ರಹಿಸುವ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ, ಕಸದ ನಿರ್ವಹಣೆ, ರಸ್ತೆ ಸಂರಕ್ಷಣೆ, ಮರಗಳ ಪಾಲನೆ ಸೇರಿದಂತೆ ಹಲವು ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿದೆ. ಆದರೆ, ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ನಿರ್ಮಾಣ ಅನುಮತಿಗಳನ್ನು ನೀಡುವ ಪ್ರಕ್ರಿಯೆಯ ಕುರಿತು ಸರ್ಕಾರಕ್ಕೆ ಯಾವುದೇ ಸ್ಪಷ್ಟ ಮಾಹಿತಿಗಳಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಹೇಗೆ ಕಾರ್ಯನಿರ್ವಹಿಸುತ್ತಿದೆ, ಯಾರು ಆಡಳಿತ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಇಲ್ಲಿನ ಹುದ್ದೆಗಳಲ್ಲಿ ಇರುವವರ ನೇಮಕಾತಿ ಸರ್ಕಾರದಿಂದ ಆಗಿದೆಯೇ ಎಂಬುದೂ ಗೊತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಲು ಸಭೆ ನಡೆಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಅಧ್ಯಕ್ಷ ವಿ. ವೀರಪ್ಪನ್, ಮುಖ್ಯ ಆಡಳಿತ ಹಾಗೂ ಭದ್ರತಾ ಅಧಿಕಾರಿ ಕರ್ನಲ್ ಅನಿರುದ್ಧ ಎನ್. ಗುಡಿ ಸೇರಿದಂತೆ ಇತರ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಹಿಂದೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿಲ್ ಕುಮಾರ್ ಅವರು ಸರ್ಕಾರವಲ್ಲ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ELCITA ನೇಮಿಸಿದೆ ಎಂದು ಆರೋಪಿಸಿದ್ದರು. ಗ್ರಾಮ ಪಂಚಾಯತ್‌ಗೆ ತೆರಿಗೆ ರಶೀದಿಗಳನ್ನು ನೀಡಲಾಗುವುದಿಲ್ಲ ಎಂದೂ ತಿಳಿಸಿದ್ದು. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಸರ್ಕಾರ ಮಧ್ಯಪ್ರವೇಶಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement