

ಬೆಂಗಳೂರು: ಪ್ರೀತಿಸಿದ ಹುಡುಗನ ಪಡೆಯಲು ವಶೀಕರಣ ಮೊರೆ ಹೋದ ಯುವತಿಗೆ ವಾಮಾಚಾರಿಯೋರ್ವ ಲಕ್ಷ ಲಕ್ಷ ವಂಚಿಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಆನ್ಲೈನ್ ನಲ್ಲಿ ವಶೀಕರಣ ಜಾಹಿರಾತು ನಂಬಿ ಯುವತಿಯೊಬ್ಬಳು ಲಕ್ಷ ಲಕ್ಷ ಹಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುಗನನ್ನು ವಶೀಕರಣ ಮಾಡಿಸುವಂತೆ ಕೇಳಿದಾಕೆಯಿಂದ 2 ಲಕ್ಷಕ್ಕೂ ಹೆಚ್ಚು ಹಣ ಪಡೆದ ಸ್ವಯಂ ಘೋಷಿತ ವಾಮಾಚಾರಿ ಮೋಸ ಮಾಡಿದ್ದಾನೆ. ಈ ಕುರಿತು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು.. ಪ್ರೀತಿಯಲ್ಲಿ ನೊಂದಿದ್ದ ಯುವತಿಯೊಬ್ಬರು ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ವಶೀಕರಣ ಜಾಹೀರಾತನ್ನು ನೋಡಿ ಮಾರು ಹೋಗಿದ್ದಾರೆ. ಕಷ್ಟಗಳಿಗೆ ಪರಿಹಾರ, ಪ್ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ' ಎಂಬ ಆಕರ್ಷಕ ಪದಗಳೊಂದಿಗೆ ಈ ಜಾಹೀರಾತು ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿತ್ತು.
ಪ್ರೀತಿಯ ವಿಚಾರದಲ್ಲಿ ಮನಸ್ಸು ನೊಂದಿದ್ದ ಯುವತಿ, ಜಾಹೀರಾತಿನಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಚಂದ್ರಶೇಖರ್ ಸುಗತ್ ಗುರೂಜಿ ಎಂದು ಪರಿಚಯಿಸಿಕೊಂಡಿದ್ದಾನೆ. ಯುವತಿಯ ಸಮಸ್ಯೆ ಕೇಳಿಸಿಕೊಂಡು, ಪ್ರೀತಿಸಿದ ಹುಡುಗನ ಬಗ್ಗೆ ವಿವರವಾಗಿ ಪ್ರಶ್ನಿಸಿದ್ದಾನೆ.
'ಮದುವೆ ಆಗುತ್ತೆ, ಆದರೆ ವಿಶೇಷ ಪೂಜೆ, ವಶೀಕರಣ ಮಾಡಬೇಕು. ಇದಕ್ಕೆ ಖರ್ಚಾಗುತ್ತದೆ ಎಂದು ನಂಬಿಕೆ ಮೂಡಿಸುವ ರೀತಿಯಲ್ಲಿ ಮಾತನಾಡಿದ್ದಾನೆ. ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತೇನೆ ಎಂಬ ಭರವಸೆಯೊಂದಿಗೆ ಯುವತಿಯ ನಂಬಿಕೆಯನ್ನು ಸಂಪೂರ್ಣವಾಗಿ ಗಳಿಸಿದ್ದಾನೆ.
ವಶೀಕರಣ ಪೂಜೆ, ವಿಶೇಷ ಹೋಮ, ಶಕ್ತಿವಂತ ಮಂತ್ರಜಪ ಎಂದು ಹೇಳುತ್ತಾ ಹಂತಹಂತವಾಗಿ ಹಣ ಕೇಳಲಾಗಿದೆ. ಯುವತಿ ಯಾವುದೇ ಅನುಮಾನ ಪಡದೆ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿದ್ದಾಳೆ. ಈ ರೀತಿ ಒಟ್ಟು 2.05 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ನೀಡಿದ್ದಾಳೆ.
ಪೂಜೆ ನಡೆಯುತ್ತಿದೆ, ಇನ್ನೂ ಸ್ವಲ್ಪ ಹಣ ಬೇಕು ಎಂದು ನಾಟಕ ಮುಂದುವರೆಸಿದ ಆರೋಪಿಯು ನಂತರ ಮತ್ತೆ 4 ಲಕ್ಷ ಹಣ ಕೇಳಿದ್ದಾನೆ. ಈ ವೇಳೆ ಯುವತಿಗೆ ಅನುಮಾನ ಬಂದು, ಪ್ರಶ್ನಿಸಲು ಆರಂಭಿಸಿದ್ದಾಳೆ.
ಏನು ಮಾಡ್ತಿಯೋ ಮಾಡ್ಕೋ ಎಂದ ಗುರೂಜಿ
ಗುರೂಜಿ ಮತ್ತೆ 4 ಲಕ್ಷ ಕೇಳಿದಾಗ ಅನುಮಾನಗೊಂಡ ಯುವತಿ ಹಣ ವಾಪಸ್ ಕೇಳಿದ್ದಾರೆ. ಈ ವೇಳೆ ಆತ ಏನು ಮಾಡ್ತಿಯೋ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈ ಬಗ್ಗೆ ಯುವತಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಆಡುಗೋಡಿ ಠಾಣೆಯಲ್ಲಿ ದೂರು!
ಈ ಬಗ್ಗೆ ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆನ್‌ಲೈನ್ ವಂಚನೆ, ನಂಬಿಕೆ ದ್ರೋಹ ಮತ್ತು ಬೆದರಿಕೆ ಆರೋಪಗಳಡಿ ತನಿಖೆ ಆರಂಭಿಸಿದ್ದಾರೆ. ಫೋನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಹಾಗೂ ಸೋಷಿಯಲ್ ಮೀಡಿಯಾ ಖಾತೆಗಳ ಮಾಹಿತಿ ಆಧರಿಸಿ ಆರೋಪಿಗಳ ಜಾಲವನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
Advertisement