

ಬೆಂಗಳೂರು: ನಗರದ AMC ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ 54 ವರ್ಷದ ಮಾಜಿ ಸೈನಿಕ ಪಿವಿ ಸುರೇಶ್ ಎಂಬುವರನ್ನು ಬನ್ನೇರುಘಟ್ಟ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಅಲ್ಲದೇ ಕೂಡಲೇ ಜಾರಿಗೆ ಬರುವಂತೆ ಅವರನ್ನು ಹಾಸ್ಟೆಲ್ ವಾರ್ಡನ್ ಸ್ಥಾನದಿಂದ ಕಾಲೇಜು ಆಡಳಿತ ಮಂಡಳಿ ವಜಾಗೊಳಿಸಿದೆ. ಹಾಸ್ಟೆಲ್ ಆವರಣದಲ್ಲಿನ ನೈರ್ಮಲ್ಯದ ಬಗ್ಗೆ ದೂರು ನೀಡಲು ಹಾಸ್ಟೆಲ್ ವಿದ್ಯಾರ್ಥಿಗಳ ಗುಂಪು ಸುರೇಶ್ ಅವರನ್ನು ಸಂಪರ್ಕಿಸಿದಾಗ ಈ ಘಟನೆ ನಡೆದಿತ್ತು.
ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಿದ್ದರಿಂದ ಕೋಪಗೊಂಡ ಕೇರಳ ಮೂಲದ ಸುರೇಶ್ ಕ್ಯಾಂಪಸ್‌ನಲ್ಲಿ ಭಾಷೆಯನ್ನು ಬಳಸಬಾರದು. ಮನೆಯಲ್ಲಿ ಕನ್ನಡ ಮಾತನಾಡಬೇಕು. ಹಿಂದಿ ಮಾತನಾಡಬೇಕೇ ಅಥವಾ ಕನ್ನಡ ಮಾತನಾಡಬೇಕೆ ಎಂಬುದನ್ನು ನಾನು ನಿರ್ಧರಿಸುತ್ತೇನೆ ಎಂದು ಹೇಳಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸ್ಥಳೀಯ ಅಧಿಕಾರಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯನ್ನು ಕೆರಳಿಸಿತ್ತು. ಸಂಸ್ಥೆಯ ಹಿತಾದೃಷ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ಸೋಮವಾರ ಮಧ್ಯಾಹ್ನ ಸುರೇಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಬನ್ನೇರುಘಟ್ಟ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಸುರೇಶ್ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
Advertisement