

ಬೆಂಗಳೂರು: ಕನ್ನಡ ರಾಜ್ಯೋತ್ಸವದಂದೆ ಕನ್ನಡ ಭಾಷೆಗೆ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಅಪಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹೌದು.. ನಿನ್ನೆ ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಮೀರ್ ಮಾಡಿದ್ದ ಭಾಷಣ ಇದೀಗ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕನ್ನಡದ ಹಿನ್ನೆಲೆ ಗೊತ್ತಿಲ್ಲದ ಸಚಿವ ಜಮೀರ್ ಅಹ್ಮದ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕನ್ನಡ ಬಗ್ಗೆ ತಪ್ಪು ಸಂದೇಶ ರವಾನಿಸಿ ಅಪಮಾನ ಮಾಡಿದ್ದಾರೆ ಎಂದು ಜೆಡಿಎಸ್ ಗುಡುಗಿದೆ.
ಜಮೀರ್ ಅಹ್ಮದ್ ಖಾನ್ ಓರ್ವ ಇತಿಹಾಸದ ಜ್ಞಾನವಿಲ್ಲದ ಅಜ್ಞಾನಿ ಎಂದು ಜೆಡಿಎಸ್ ಕಿಡಿಕಾರಿದ್ದು, ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜನತಾದಳ (ಜಾತ್ಯಾತೀತ), 'ಕನ್ನಡ ರಾಜ್ಯೋತ್ಸವ ದಿನದಂದೇ ಭಾಷೆ ಹಿನ್ನೆಲೆ ಗೊತ್ತಿಲ್ಲದೇ ಮಾತನಾಡಿರುವುದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 2000 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಕನ್ನಡ ಭಾಷೆ ಹಾಗೂ ಕರ್ನಾಟಕ ಇತಿಹಾಸದ ಜ್ಞಾನವಿಲ್ಲದ ಅಜ್ಞಾನಿ B.Z.ಜಮೀರ್ ಅಹ್ಮದ್ ಖಾನ್ ಗೆ ನಾಚಿಕೆಯಾಗಬೇಕು' ಎಂದು ಪೋಸ್ಟ್ ಮಾಡಿದೆ.
ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಶಾಸ್ತ್ರೀಯ ಭಾಷೆ ಸ್ಥಾನಮಾನ ಹೊಂದಿರುವ ಕನ್ನಡದ ಬಗ್ಗೆ ಸಚಿವ ಜಮೀರ್ ರಾಜ್ಯದ ಜನರಿಗೆ ತಪ್ಪು ಸಂದೇಶಗಳನ್ನು ನೀಡಿ ಅಪಮಾನ ಮಾಡಿದ್ದಾರೆ. ಇದನ್ನು ಕನ್ನಡಿಗರು ಸಹಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇಂತಹ ಬೇಜವಾಬ್ದಾರಿ, ಅವಿವೇಕಿ ಮಂತ್ರಿ ಜಮೀರ್‌ರನ್ನು ಸಂಪುಟದಿಂದ ಮೊದಲು ವಜಾಗೊಳಿಸಬೇಕು' ಎಂದು ಜೆಡಿಎಸ್ ಆಗ್ರಹಿಸಿದೆ.
ವಿಡಿಯೋ ವೈರಲ್
ಇನ್ನು ಜಮೀರ್ ಅಹ್ಮದ್ ಖಾನ್ ರಾಜ್ಯೋತ್ಸವ ವೇದಿಕೆಯ ಭಾಷಣದಲ್ಲಿ ಅವರು ಮಾತನಾಡಿದ ವಿಡಿಯೋ ಹಂಚಿಕೊಳ್ಳಲಾಗಿದೆ. ಆ ವಿಡಿಯೋ ವೈರಲ್ ಆಗುತ್ತಿದೆ.
ಏನು ಹೇಳಿದ್ದರು ಜಮೀರ್?
ಕನ್ನಡ ರಾಜ್ಯೋತ್ಸವ ಭಾಷಣದಲ್ಲಿ ಎರಡು ಬಾರಿ ಜಮೀರ್ ಅಹ್ಮದ್ ಖಾನ್ ಅವರು "ತಪ್ಪು ಮಾಹಿತಿ ಉಚ್ಛಾರ ಮಾಡಿದ್ದಾರೆ. ಕನ್ನಡ ಭಾಷೆಗೆ 200 ವರ್ಷಗಳ ಇತಿಹಾಸ ಇದೆ. ನಾಲ್ಕೈದು ಭಾಷೆಗಳಲ್ಲಿ ಕನ್ನಡ ಒಂದು ಎಂದು ಹೇಳುತ್ತೇನೆ. 1993ರಲ್ಲಿ ಕನ್ನಡ ಅಂತಾ ನಾಮಕರಣ ಮಾಡಲಾಗಿದೆ' ಎಂದು ಹೇಳಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
1973ರಲ್ಲಿ ಕರ್ನಾಟಕ ಎಂದು ನಾಮಕರಣವಾಗಿತ್ತು. ಆದರೆ ಜಮೀರ್ ಅವರು, 1993ರಲ್ಲಿ ಕರ್ನಾಟಕ ಅಂತಾ ಕರೆಯಲಾಯಿತು ಎಂದು ತಿಳಿಸಿದ್ದಾರೆ. ಜೊತೆಗೆ 2000 ವರ್ಷಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ 200 ವರ್ಷಗಳ ಇತಿಹಾಸ ಇದೆ ಎಂದು ಜಮೀರ್ ಹೇಳಿದ್ದಾರೆ.
Advertisement