

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದೆ. Zepto ಡೆಲಿವರಿ ರೈಡರ್‌ಗೆ ಇಬ್ಬರು ಅಪರಿಚಿತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜನವರಿ 4 ರಂದು ಕಗ್ಗದಾಸಪುರ 29 ನೇ ಕ್ರಾಸ್ ಜಂಕ್ಷನ್ ಬಳಿ 8 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ.
ಕಂಪನಿಯೊಂದರ ಗೋಡೌನ್‌ನಿಂದ ಆರ್ಡರ್ ತೆಗೆದುಕೊಂಡು ಡೆಲಿವರಿ ರೈಡರ್ ದೀಪಕ್ ಕುಮಾರ್ ಬರುತ್ತಿದ್ದಾಗ ಜಂಕ್ಷನ್ ನಲ್ಲಿ ಎದುರು ದಿಕ್ಕಿನಿಂದ ಹೋಂಡಾ ಆಕ್ಟಿವಾ ಬೈಕ್ ನಲ್ಲಿ ಬಂದ ಇಬ್ಬರು ಏಕಾಏಕಿ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ನಂತರ ಮೇಲೆ ಎದ್ದು ಕುಮಾರ್ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ.
ಬೈಕ್ ಓಡಿಸುತ್ತಿದ್ದ ವ್ಯಕ್ತಿ ತನ್ನ ಹೆಲ್ಮೆಟ್ ತೆಗೆದು ಕುಮಾರ್ ತಲೆಗೆ ಹೊಡೆದಿದ್ದಾನೆ. ಇದರಿಂದಾಗಿ Zepto Rider ಸ್ವಲ್ಪ ಕಾಲ ಪ್ರಜ್ಞೆ ಕಳೆದುಕೊಂಡಿದ್ದು, ಕೆಳಗೆ ಬಿದ್ದರೂ ಆತನ ಮೇಲೆ ಹಲ್ಲೆ ಮುಂದುವರೆದಿದೆ. ಇಬ್ಬರು ಸೇರಿ ಪದೇ ಪದೇ ಹಲ್ಲೆ ಮಾಡಿದ್ದಾರೆ.
ಆಗ ಜನರ ಗುಂಪು ಸೇರುತ್ತಿದ್ದಂತೆಯೇ ಕೆಲವರು ಬೈಕ್ ಸವಾರರಿಗೆ ಹೊಡೆಯಲು ಶುರು ಮಾಡಿದ್ದಾರೆ. ನಂತರ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಶುಕ್ರವಾರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಡಿಯೋ ಪರಿಶೀಲಿಸಿದ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರನ್ನು ಗುರುತಿಸಿ, ಬಂಧಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement