

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವನ್ನು ಬಿಜೆಪಿ ಸ್ವಾಗತಿಸಿದ್ದು, ಇದೇ ವೇಳೆ ವಿವಿಧ ನೆಪಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ವ್ಯಂಗ್ಯವಾಡಿದೆ.
ಒಬಿಸಿ (ಎ) ಮತ್ತು ಒಬಿಸಿ (ಬಿ) ಮೀಸಲಾತಿಯನ್ನು ಅವೈಜ್ಞಾನಿಕವಾಗಿ ರೂಪಿಸಿ, ಬೆಂಗಳೂರಿನ ಬಿಜೆಪಿ ಪಕ್ಷದ ಅರ್ಹ ಹಾಗೂ ಗೆಲ್ಲುವ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಹೊರಗಿಡುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಆದರೆ, ನ್ಯಾಯಾಲಯದ ಆದೇಶದಿಂದ ಅವರಿಗೆ ಮುಖಭಂಗವಾಗಿದೆ ಎಂದು ಹೇಳಿದೆ.
ಜಯನಗರ ಬಿಜೆಪಿ ಶಾಸಕ ಹಾಗೂ ಮಾಜಿ ಕಾರ್ಪೊರೇಟರ್ ಸಿ.ಕೆ. ರಾಮಮೂರ್ತಿ ಅವರು ಇತ್ತೀಚೆಗೆ ಪ್ರಕಟಿಸಿದ ವಾರ್ಡ್ ಮೀಸಲಾತಿ ಕರಡು ಪಟ್ಟಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಪಟ್ಟಿಯ ವಿರುದ್ಧ ಅನೇಕರು ನ್ಯಾಯಾಲಯದ ಮೆಟ್ಟಿಲೇರಲಿದ್ದು, ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆಯನ್ನು ಇನ್ನಷ್ಟು ಮುಂದೂಡುವ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ಪದ್ಮನಾಭನಗರ ಕ್ಷೇತ್ರದ ಯಡಿಯೂರು ವಾರ್ಡ'ನ್ನು ಸರ್ಕಾರ ಟಾರ್ಗೆಟ್ ಮಾಡಿದೆ. ಈ ವಾರ್ಡ್ ಅನ್ನು ಒಬಿಸಿ (ಬಿ) ಮಹಿಳೆಗೆ ಮೀಸಲಿರಿಸಲಾಗಿದೆ. ಹೀಗಾಗಿ ಬಿಜೆಪಿ ನಾಯಕ ಎನ್.ಆರ್. ರಮೇಶ್ ಅಥವಾ ಅವರ ಪತ್ನಿ ಯಾರೂ ಸ್ಪರ್ಧಿಸಲು ಅರ್ಹರಾಗಿಲ್ಲ.
ಇದೇ ರೀತಿ ಜಯನಗರ ಕ್ಷೇತ್ರದ ಶಾಖಾಂಬರಿ ನಗರ ವಾರ್ಡನ್ನು ಒಬಿಸಿ (ಬಿ)ಗೆ ಮೀಸಲಿರಿಸಲಾಗಿದೆ. “ಹಿಂದಿನ ಬಿಜೆಪಿ ಕಾರ್ಪೊರೇಟರ್ ಸೋಮಶೇಖರ್ ತಮ್ಮ ಕಾರ್ಯಗಳಿಂದ ಜನಪ್ರಿಯರಾಗಿದ್ದು, ಅವರ ಗೆಲುವು ಖಚಿತವಾಗಿತ್ತು. ಆದರೆ ಈಗ ಮೀಸಲಾತಿಯಿಂದ ಅವರು ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ನಂತರ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿಳಂಬವಾಗುತ್ತಿರುವುದರ ಕುರಿತು ನ್ಯಾಯಾಲಯದ ಒತ್ತಡ ಎದುರಾಗಲಿದೆ ಎಂಬುದು ಸರ್ಕಾರಕ್ಕೆ ತಿಳಿದಿತ್ತು. ಅದಕ್ಕಾಗಿಯೇ ಬಿಜೆಪಿ ಶಾಸಕರ ಕ್ಷೇತ್ರಗಳನ್ನು ಮಾತ್ರ ಗುರಿಯಾಗಿಸಿಕೊಂಡು ವಾರ್ಡ್ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಎನ್.ಆರ್. ರಮೇಶ್ ಅವರು ಮಾತನಾಡಿ, ಪದ್ಮನಾಭನಗರ ಕ್ಷೇತ್ರವನ್ನು ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪಶ್ಚಿಮ ಎಂಬ ಎರಡು ಪಾಲಿಕೆಗಳಾಗಿ ವಿಭಜಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಡಿಯೂರು ವಾರ್ಡಿನಲ್ಲಿ 9,000 ಬ್ರಾಹ್ಮಣರು ಹಾಗೂ 7,000 ಒಬಿಸಿ (ಎ) ಮತದಾರರಿದ್ದಾರೆ. ಆದರೂ ಅದನ್ನು ಒಬಿಸಿ (ಬಿ) ಮಹಿಳೆಗಳಿಗೆ ಮೀಸಲಿರಿಸಲಾಗಿದೆ. ಇದು ಬಿಜೆಪಿ ಗೆಲುವು ಖಚಿತವಾಗಿದ್ದ ಕ್ಷೇತ್ರ. ನನ್ನ ಸ್ಪರ್ಧೆಯನ್ನು ತಡೆಯುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಅವೈಜ್ಞಾನಿಕ ಮೀಸಲಾತಿ ಪಟ್ಟಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳೂ ಸೇರಿದಂತೆ 20ಕ್ಕೂ ಹೆಚ್ಚು ಮಾಜಿ ಕಾರ್ಪೊರೇಟರ್‌ಗಳು ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆಂದು ಹೇಳಿದ್ದಾರೆ.
Advertisement