

ಬೀದರ್: ಗಾಳಿ ಪಟ ಹಾರಿಸುವ ಮಾಂಜಾ ದಾರಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ಅತನ ಕತ್ತು ಸೀಳಿದ ಘಟನೆ ಬೀದರ್ ನಲ್ಲಿ ವರದಿಯಾಗಿದೆ.
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ಈ ದುರ್ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಜೀವ್ ಕುಮಾರ್ ಹೊಸಮನಿ (48 ವರ್ಷ) ಎಂದು ಗುರುತಿಸಲಾಗಿದೆ. ಸಂಜಕುಮಾರ ಗುಂಡಪ್ಪಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರಿದ್ದರು ಎಂದು ತಿಳಿದುಬಂದಿದೆ.
ಸಂಕ್ರಾಂತಿಗೆ ಮಗಳ ಕರೆ ತರಲು ಹೋಗುತ್ತಿದ್ದ ತಂದೆ
ಇನ್ನು ಪೊಲೀಸ್ ಮೂಲಗಳ ಪ್ರಕಾರ ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಸಜೀವ್ ಕುಮಾರ್ ಹೊಸಮನಿ ಬೈಕ್ ಮೇಲೆ ತೆರಳುತ್ತಿದ್ದರು. ಈ ವೇಳೆ ವೇಳೆ ಮಾಂಜಾ ದಾರ ಕುತ್ತಿಗೆಗೆ ತಗುಲಿ ಕುತ್ತಿಗೆ ಕೊಯ್ದುಕೊಂಡಿದೆ. ಬಳಿಕ ಬೈಕ್ ಮೇಲಿಂದ ಕೆಳಗೆ ಬಿದ್ದು ಕೆಲಹೊತ್ತು ರಕ್ತದ ಮಡವಿನಲ್ಲಿ ಒದ್ದಾಡಿ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮಗಳಿಗೆ ಕರೆ ಮಾಜಿ ಪ್ರಾಣಬಿಟ್ಟ ಹೊಸಮನಿ
ಮಾಂಜಾದಾರ ಕುತ್ತಿಗೆ ಸೀಳುತ್ತಲೇ ಬೈಕ್ ನಿಂದ ಕೆಳಗೆ ಬಿದ್ದ ಸಜೀವ್ ಕುಮಾರ್ ಹೊಸಮನಿ ತೀವ್ರ ರಕ್ತದ ಮುಡುವಿನಲ್ಲಿ ಒದ್ದಾಡುತ್ತಿದ್ದರು. ಈ ವೇಳೆ ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡು ಮೊಬೈಲ್ ತೆಗೆದುಕೊಂಡು ತಮ್ಮ ಮಗಳಿಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳೀಯರು ನೋಡಿ ಗಾಯದ ಮೇಲೆ ಬಟ್ಟೆಯನ್ನು ಇಟ್ಟು ರಕ್ತಸ್ರಾವ ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಸ್ವಲ್ಪ ಸಮಯದ ನಂತರ ಅವರು ಕೊನೆಯುಸಿರೆಳೆದರು ಎನ್ನಲಾಗಿದೆ.
ಸೂಕ್ತ ಸಮಯಕ್ಕೆ ಬಾರದ ಆ್ಯಂಬುಲೆನ್ಸ್
ಇನ್ನು ಸ್ಥಳೀಯ ನಿವಾಸಿಗಳ ಪ್ರಕಾರ, ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತು, ಆದರೆ ಅದು ಬರುವ ಹೊತ್ತಿಗೆ ಹೊಸಮನಿ ಕೊನೆಯುಸಿರೆಳೆದಿದ್ದರು. ಆ್ಯಂಬುಲೆನ್ಸ್ ಸೂಕ್ತ ಸಮಯಕ್ಕೆ ಬಂದಿದ್ದರೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಬದುಕಿಸಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬಂದಿದ್ದರೆ ಹೊಸಮನಿ ಬದುಕುಳಿಯುತ್ತಿದ್ದರು. ಆ್ಯಂಬಲೆನ್ಸ್ ವಿಳಂಬದಿಂದಾಗಿಯೇ ಅವರು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಮನ್ನಾ ಎಖೆಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ನಾವು ಸ್ಥಳಕ್ಕೆ ಹೋದ ವೇಳೆ ಗಾಳಿಪಟ ದಾರ ಇರಲಿಲ್ಲ. ಘಟನೆಯನ್ನು ಸೂಕ್ತ ತನಿಖೆ ನಡೆಸುತ್ತಿದ್ದೇವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಮನ್ನಾಏಖೆಳ್ಳಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Advertisement