

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದನ್ನು ವಿರೋಧಿಸಿ ಜನವರಿ 17 ರಂದು ಬಳ್ಳಾರಿಯಲ್ಲಿ ಬೃಹತ್ ರ್ಯಾಲಿಯನ್ನು ಬಿಜೆಪಿ ಆಯೋಜಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬಳ್ಳಾರಿಯಲ್ಲಿ ಶಾಸಕರಾದ ಭರತ್ ರೆಡ್ಡಿ ಮತ್ತು ಜಿ. ಜನಾರ್ದನ ರೆಡ್ಡಿ ಅವರ ಗುಂಪುಗಳ ನಡುವಿನ ರಾಜಕೀಯ ಘರ್ಷಣೆಯಲ್ಲಿ ರಾಜಶೇಖರ ಎಂಬ ಕಾರ್ಯಕರ್ತರು ಮೃತಪಟ್ಟಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಬಳ್ಳಾರಿಯಲ್ಲಿ ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಶಾಸಕರೊಬ್ಬರು ತಮ್ಮ ಗೂಂಡಾಗಿರಿಯಿಂದ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ವಿಜಯೇಂದ್ರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಲ್ಲಾಪುರದಲ್ಲಿ ದಲಿತ ಮಹಿಳೆಯ ಹತ್ಯೆ ಮತ್ತು ಸುಳ್ಯದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ನ್ನು ಸಹ ಅವರು ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಈ ನಿಟ್ಟಿನಲ್ಲಿ ಬಿಜೆಪಿ ರ್ಯಾಲಿ ಹಮ್ಮಿಕೊಂಡಿದ್ದು, ಜನವರಿ 17 ರಂದು, ಪಕ್ಷದ ಎಲ್ಲಾ ಹಿರಿಯ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ವಿವಿಧ ಆಂದೋಲನಗಳನ್ನು ಸಹ ಆಯೋಜಿಸಿದೆ. ಮುಂದಿನ ದಿನಗಳಲ್ಲಿ, ಸರ್ಕಾರ ರೈತರನ್ನು ವಂಚಿಸುತ್ತಿರುವುದನ್ನು ವಿರೋಧಿಸಿ ಬಾಗಲಕೋಟೆಯಲ್ಲಿ ದೊಡ್ಡ ಪ್ರತಿಭಟನೆ ನಡೆಸುತ್ತೇವೆ. ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣವನ್ನು ಪಾವತಿಸದಿರುವುದನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಯೋಜಿಸುತ್ತಿದ್ದೇವೆ. ಅಲ್ಲದೆ, ಈ ಸರ್ಕಾರದ ಅಡಿಯಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದರ ಜೊತೆಗೆ, ಸರ್ಕಾರವು ಅಬಕಾರಿ ಆದಾಯದ ಗುರಿಯನ್ನು ಹೆಚ್ಚಿಸುವ ಮೂಲಕ ಜನರನ್ನು ಹೆಚ್ಚು ಮದ್ಯ ವ್ಯಸನಿಗಳನ್ನಾಗಿ ಮಾಡುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಹಾವಳಿ ವಿರುದ್ಧ ಪ್ರತಿಭಟನಾ ರ್ಯಾಲಿಯನ್ನು ಯೋಜಿಸಲಾಗುವುದು. ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಜೂಜಾಟ (ಮಟ್ಕಾ) ಹೆಚ್ಚಾಗಿದೆ ಎಂದರು. ಪೊಲೀಸರು ತಮ್ಮ ಹುದ್ದೆಗಳನ್ನು ಪಡೆಯಲು ಲಂಚ ನೀಡಬೇಕಾದ ಪರಿಸ್ಥಿತಿಯಿದೆ. ಆದ್ದರಿಂದ, ಇಂತಹ ಸಮಾಜ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗುತ್ತಿದೆ ಎಂದರು.
Advertisement