

ಗದಗ: ಕೆಲ ದಿನಗಳ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಹಾಗೂ ಪುರಾತನ ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಉತ್ಖನನ ಕಾರ್ಯ ಆರಂಭಿಸಿದ್ದು, ಎರಡನೇ ದಿನದ ಶೋಧ ವೇಳೆ ಶಿವಲಿಂಗದ ಭಾಗದಂತೆ ಕಾಣುವ ಕಲ್ಲೊಂದು ಪತ್ತೆಯಾಗಿದೆ.
ಗದಗದಿಂದ ಸುಮಾರು 12 ಕಿ.ಮೀ ಹಾಗೂ ಹುಬ್ಬಳ್ಳಿ–ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಕ್ಕುಂಡಿ, ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಕಲಚೂರಿಗಳು ಹಾಗೂ ವಿಜಯನಗರ ಅರಸರ ಆಡಳಿತದಲ್ಲಿದ್ದ ಐತಿಹಾಸಿಕ ಗ್ರಾಮವಾಗಿದೆ.
ಶಿಲ್ಪಕಲೆಗಾಗಿ ಪ್ರಸಿದ್ಧವಾಗಿರುವ ಲಕ್ಕುಂಡಿಯಲ್ಲಿ ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ಅಮೂಲ್ಯ ಸಂಪತ್ತು ಭೂಗರ್ಭದಲ್ಲಿ ಅಡಗಿದೆ ಎಂಬ ನಂಬಿಕೆ ಇದೆ. ಬಾದಾಮಿ, ಹಂಪಿ ಹಾಗೂ ಅನೇಕುಂಡಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ಲಕ್ಕುಂಡಿಗೂ ಭೇಟಿ ನೀಡುವುದು ಸಾಮಾನ್ಯವಾಗಿದೆ.
ಇತ್ತೀಚೆಗೆ ಗ್ರಾಮದ ಕೃಷಿಭೂಮಿಯೊಂದರಲ್ಲಿ ಚಿನ್ನಾಭರಣಗಳು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಉತ್ಖನನ ಕಾರ್ಯ ಆರಂಭವಾಗಿದ್ದು, ಇದರಿಂದ ಜನರ ಆಸಕ್ತಿ ಹೆಚ್ಚಾಗಿದೆ. ಸ್ಥಳದಲ್ಲಿ ಮತ್ತಷ್ಟು ನಿಧಿ ಹಾಗೂ ಪುರಾತನ ವಸ್ತುಗಳು ಪತ್ತೆಯಾಗಿದ್ದೇ ಆದರೆ, ಸಂಪೂರ್ಣ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ 2004–05ರಲ್ಲಿ ಪ್ರಭುದೇವರ ಮಠದ ದಕ್ಷಿಣ ಭಾಗದಲ್ಲಿ ನಡೆಸಿದ ಉತ್ಖನನ ಕಾರ್ಯದ ವೇಳೆ ಕಲ್ಯಾಣ ಚಾಲುಕ್ಯ ಕಾಲದ ಅನೇಕ ಶಾಸನಗಳು ಹಾಗೂ ಸ್ಮಾರಕಗಳು ಪತ್ತೆಯಾಗಿದ್ದವು. ಇವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ,
ಉತ್ಖನನ ಕಾರ್ಯ ಆರಂಭವಾದ ಹಿನ್ನೆಲೆಯಲ್ಲಿ ಅನೇಕ ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಲಕ್ಕುಂಡಿಗೆ ಭೇಟಿ ನೀಡುತ್ತಿರುವುದು ಕಂಡು ಬಂದಿದೆ.
ಉತ್ಖನನ ಕಾರ್ಯ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥರು, ಸರ್ಕಾರವು ಬೇರೆಡೆ ಮನೆಗಳನ್ನು ಒದಗಿಸಿದರೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಲಕ್ಕುಂಡಿಯಲ್ಲಿ ಕನಿಷ್ಠ 50 ಪುರಾತನ ದೇವಸ್ಥಾನಗಳು ಹಾಗೂ 50 ಬಾವಿಗಳ ಅವಶೇಷಗಳು ಪತ್ತೆಯಾಗುವ ಸಾಧ್ಯತೆ ಇದೆ ಇತಿಹಾಸಕಾರರು ಹೇಳಿದ್ದಾರೆ.
ಎಲ್‌ಡಿಎ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ್ ಮಾತನಾಡಿ, ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. ಶೀಘ್ರದಲ್ಲೇ ಗ್ರಾಮದೆಲ್ಲೆಡೆ 15 ರಿಂದ 20 ಸ್ಥಳಗಳಲ್ಲಿಯೂ ಉತ್ಖನನ ಕಾರ್ಯ ನಡೆಸುವ ಯೋಜನೆ ಇದೆ. 10ನೇ ಶತಮಾನದ ಲಕ್ಕುಂಡಿಯನ್ನು ಹೊರತರುವುದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ತಿಳಿಸಿದರು.
ಎಲ್‌ಡಿಎ ಆಯುಕ್ತ ಶರಣು ಗೊಗೇರಿ ಮಾತನಾಡಿ, ತಜ್ಞರ ಮಾರ್ಗದರ್ಶನದಲ್ಲಿ ದಿನಗೂಲಿ ಕಾರ್ಮಿಕರ ಮೂಲಕ ಈ ಕಾರ್ಯ ನಡೆಯುತ್ತಿದೆ. ಕಾರ್ಮಿಕರಿಗೆ ದಿನಕ್ಕೆ 375 ರೂ. ವೇತನ ನೀಡಲಾಗುತ್ತಿದೆ. ಲಕ್ಕುಂಡಿಯ ಇತಿಹಾಸವನ್ನು ಬಿಚ್ಚಿಡುವ ಅಮೂಲ್ಯ ಶಾಸನಗಳು, ನಿಧಿಗಳು ಮತ್ತು ಸ್ಮಾರಕಗಳು ಪತ್ತೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
Advertisement