

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪವಿತ್ರಾಗೌಡಗೆ ಕರ್ನಾಟಕ ಹೈಕೋರ್ಟ್ ಶಾಕ್ ನೀಡಿದ್ದು, ಅವರಿಗೆ ನೀಡಿದ್ದ ಮನೆ ಊಟ ಸವಲತ್ತನ್ನು ದಿಢೀರ್ ರದ್ದು ಮಾಡಿದೆ.
ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಪವಿತ್ರಾ ಗೌಡ ಪರವಾಗಿ ವಕೀಲರು ಇತ್ತೀಚೆಗೆ ಮನೆಯೂಟ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದರ ಜತೆ ನಾಗರಾಜು ಮತ್ತು ಲಕ್ಷ್ಮಣ್ ಕೂಡ ಮನೆಯೂಟ ಬೇಕೆಂದು ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ಪವಿತ್ರಾ ಗೌಡ ಹಾಗೂ ಇತರೆ ಇಬ್ಬರಿಗೆ ಮನೆಯೂಟ ನೀಡಬೇಕೆಂದು ಆದೇಶ ನೀಡಿತ್ತು. ಮೊದಲು ದಿನಕ್ಕೊಮ್ಮೆ ಮನೆಯೂಟ ನೀಡುವ ಆದೇಶ ನೀಡಲಾಗಿತ್ತು. ಆ ಬಳಿಕ ಆದೇಶವನ್ನು ಮಾರ್ಪಾಟು ಮಾಡಿ ವಾರಕೊಮ್ಮೆ ಮಾತ್ರ ಮನೆಯೂಟ ನೀಡಬೇಕೆಂದು 57ನೇ ಸಿಸಿಎಚ್ ನ್ಯಾಯಾಲಯ ಹೇಳಿತ್ತು.
ಇದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜೈಲಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಆರೋಪಿಗೆ ವಿಶೇಷ ಸವಲತ್ತು ನೀಡಬಾರದು ಎಂದು ಸೂಚಿಸಿದೆ, ವಿಶೇಷ ಸವಲತ್ತು ನೀಡಿದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.
57ನೇ ಸಿಸಿಎಚ್ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಜೈಲಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಯಾವುದೇ ಆರೋಪಿಗೆ ವಿಶೇಷ ಸವಲತ್ತು ನೀಡಬಾರದು. ಒಂದು ವೇಳೆ ಪವಿತ್ರಾ ಗೌಡ ಮತ್ತು ಇತರರಿಗೆ ಮನೆಯೂಟ ನೀಡಿದರೆ ಇತರೆ ಆರೋಪಿಗಳು ಬೇಡಿಕೆ ಇಡುತ್ತಾರೆ. ಆಗ ಜೈಲಿನ ಶಿಸ್ತು ಸಡಿಲವಾಗುತ್ತದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.
ಪವಿತ್ರಾ ಗೌಡ ಮತ್ತು ಇರೆ ಇಬಬರು ಆರೋಪಿಗಳಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ ಜೈಲಿನ ಇತರೆ ಕೈದಿಗಳೂ ಸಹ ಮನೆ ಊಟಕ್ಕೆ ಬೇಡಿಕೆ ಇಡುತ್ತಾರೆ, ಜೈಲಿನ ಶಿಸ್ತು ಸಡಿಲವಾಗುತ್ತದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.
ಜೈಲಿನಲ್ಲಿ ಗುಣಮಟ್ಟದ ಆಹಾರ
ಜೈಲಿನ ಊಟಕ್ಕೆ FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) 4 ಸ್ಟಾರ್ ನೀಡಿದೆ. ಆದ್ದರಿಂದ ಜೈಲಿನ ಊಟದ ಗುಣಮಟ್ಟದ ಬಗ್ಗೆ ಬೇರೆ ಕೈದಿಗಳು ಆಕ್ಷೇಪ ಎತ್ತಿಲ್ಲ. ಹೀಗಾಗಿ 57ನೇ ಸಿಸಿಹೆಚ್ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ರಾಜ್ಯ ಸರ್ಕಾರ ಮನವಿ ಮಾಡಿದೆ.
ಜೈಲಿನ ಆಹಾರ ಶುಚಿಯಾಗಿಯೂ, ರುಚಿಯಾಗಿಯೂ, ಆರೋಗ್ಯಕರವಾಗಿಯೂ ಇದೆ ಹೀಗಿರುವಾಗ ಮನೆಯಿಂದ ಊಟ ನೀಡುವ ಔಚಿತ್ಯ ಏನಿದೆ? ಎಂದು ಸರ್ಕಾರಿ ವಕೀಲರು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು. ವಾದವನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು ನೀಡಬೇಕೆಂದು 57ನೇ ಸಿಸಿಎಚ್ ಕೋರ್ಟ್ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.
ಎಲ್ಲರೂ ಸಮಾನರೇ
ಕಾನೂನಿಗೆ ಎಲ್ಲರೂ ಒಂದೇ. ಯಾರಿಗೂ ವಿಶೇಷ ಸವಲತ್ತು ನೀಡುವಂತಿಲ್ಲ. ಜೈಲು ಕೈಪಿಡಿಯಲ್ಲಿ ಮನೆ ಊಟವನ್ನು ಕೇವಲ ಬಹಳ ವಿಶೇಷ ಸಂದರ್ಭದಲ್ಲಿ ಐಜಿಪಿ ಅವರ ಒಪ್ಪಿಗೆ ಮೇರೆಗೆ ಮಾತ್ರವೇ ನೀಡಬೇಕು, ಅದೂ ಆ ಕಾರಣ ವೈದ್ಯಕೀಯ ಕಾರಣ ಆಗಿರಬೇಕು ಎಂದು ಹೈಕೋರ್ಟ್ ಹೇಳಿದೆ. ಆ ಮೂಲಕ ಮನೆಯೂಟದ ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರಿಗೆ ಹಿನ್ನಡೆಯಾಗಿದೆ.
Advertisement