

ಬೆಂಗಳೂರು: ಸಹಕಾರ ಸಂಘಗಳ ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕ ಸರ್ದಾರ್ ಸರ್ಫರಾಜ್ ಖಾನ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದಾಗ, ಅವರು ₹14.38 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬುಧವಾರ ತಿಳಿಸಿದೆ.
ಲೋಕಾಯುಕ್ತ ಅಧಿಕಾರಿಗಳು 2025ರ ಡಿಸೆಂಬರ್ 24 ರಂದು ಅಕ್ರಮ ಆಸ್ತಿ (ಡಿಎ) ಗಳಿಕೆ ಪ್ರಕರಣದಲ್ಲಿ ಖಾನ್ ಅವರ ನಿವಾಸಗಳು, ಕಚೇರಿಗಳು ಮತ್ತು ಅವರ ಸಂಬಂಧಿಕರ ನಿವಾಸಗಳು ಸೇರಿದಂತೆ ಅವರಿಗೆ ಸಂಬಂಧಿಸಿದ 13 ಸ್ಥಳಗಳಲ್ಲಿ ದಾಳಿ ನಡೆಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಖಾನ್ ಸದ್ಯ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಸರ್ಕಾರದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರ ಆಪ್ತರು.
ಶೋಧದ ಸಮಯದಲ್ಲಿ, ಖಾನ್ ಅವರು ನಾಲ್ಕು ಮನೆಗಳು, 37 ಎಕರೆ ಕೃಷಿ ಭೂಮಿಯನ್ನು ಹೊಂದಿರುವುದು ಪತ್ತೆಯಾಗಿದ್ದು, ಇದು ₹8.44 ಕೋಟಿ ಮೌಲ್ಯದ್ದಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಅಂದಾಜಿಸಿದ್ದಾರೆ.
₹3 ಕೋಟಿ ಮೌಲ್ಯದ ಆಭರಣಗಳು, ₹1.64 ಕೋಟಿ ಮೌಲ್ಯದ ವಾಹನಗಳು, ಸ್ಥಿರ ಠೇವಣಿಗಳು ಮತ್ತು ₹5.94 ಕೋಟಿ ಮೌಲ್ಯದ ಇತರ ಹೂಡಿಕೆಗಳನ್ನು ತಂಡವು ಪತ್ತೆಹಚ್ಚಿದೆ ಎಂದು ಪ್ರಕಟಣೆ ತಿಳಿಸಿದೆ.
Advertisement