New Year party ವೇಳೆ ಬಿದ್ದು ಗಾಯ: ವೈದ್ಯಕೀಯ ವೆಚ್ಚ ತಪ್ಪಿಸಲು ಯುವಕನನ್ನೇ ಹತ್ಯೆಗೈದ ಸ್ನೇಹಿತರು..!
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬಿದ್ದು ಯುವಕ ಗಾಯಗೊಂಡಿದ್ದು, ಈ ವೇಳೆ ಜೊತೆಗಿದ್ದ ಸ್ನೇಹಿತರು ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸುವುದನ್ನು ತಪ್ಪಿಸಲು ಹೋಗಿ ಯುವಕನನ್ನೇ ಹತ್ಯೆ ಮಾಡಿರುವ ಘಟನೆ ಮಾಗಡಿ ತಾಲ್ಲೂಕಿನ ವಾಜರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ದಿನಗೂಲಿ ಕಾರ್ಮಿಕ ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಕಟ್ಟಡ ನಿರ್ಮಾಣ ಕಾರ್ಮಿಕ ಸುದೀಪ್ (19) ಮತ್ತು ಖಾಸಗಿ ಕಂಪನಿಯಲ್ಲಿ ಕಾರು ಚಾಲಕನಾಗಿರುವ ಪ್ರಜ್ವಲ್ (19) ಎಂದು ಗುರ್ತಿಸಲಾಗಿದೆ.
ಮೂವರೂ ಮಾಗಡಿ ತಾಲ್ಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದು, ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಮೂವರು ಹೊಸ ವರ್ಷದ ಸಂಭ್ರಮಾಚರಣೆಗೆ ತೆರಳಿದ್ದು, ಮದ್ಯ ಸೇವನೆ ಮಾಡಲು ಎಳನೀರು ಬೇಕು, ತೆಂಗಿನ ಮರ ಹತ್ತುವಂತೆ ಮೃತ ವಿನೋದ್'ಗೆ ತಿಳಿಸಿದ್ದಾರೆ. ಈ ವೇಳೆ ಮರ ಹತ್ತಿದ್ದ ವಿನೋದ್ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ನೋವಿನಿಂದ ವಿನೋದ್ ಕೂಗಲು ಆರಂಭಿಸುತ್ತಿದ್ದಂತೆ ಭಯಭೀತರಾದ ಇಬ್ಬರೂ ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ.
ದಾರಿ ಮಧ್ಯೆ ಗ್ರಾಮಸ್ಥರು ಪ್ರಶ್ನಿಸಿದರೆ, ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ನಾವೇ ಭರಿಸಬೇಕು. ಲಕ್ಷಾಂತರ ವೆಚ್ಚವಾಗುತ್ತದೆ ಎಂದು ಚಿಂತಿಸಿ, ವಿನೋದ್ ನನ್ನು ವಜರಹಳ್ಳಿ ಬಳಿಯ ಕೆರೆಗೆ ಎಸೆದಿದ್ದಾರೆ. ನಂತರ ಶವವನ್ನು ಹೊರತೆಗೆದು, ತಂತಿ ಬಳಸಿ ಕಲ್ಲಿಗೆ ಶವವನ್ನು ಕಟ್ಟಿ ಬಾವಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ.
ಇತ್ತ ವಿನೋದ್ ಮನೆಗೆ ವಾಪಸಾಗದ ಕಾರಣ ಆತನ ಅಜ್ಜ ಜನವರಿ2 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆದೂರು ದಾಖಲಿಸಿದ್ದಾರೆ. ಹುಡುಕಾಟ ಆರಂಭಿಸಿದ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಜನವರಿ 17 ರಂದು, ಬಾವಿಯಲ್ಲಿ ಈಜಲು ಹೋದ ಕೆಲವು ಯುವಕರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿನೋದ್ ಕೊನೆಯ ಬಾರಿಗೆ ತನ್ನ ಸ್ನೇಹಿತರೊಂದಿಗೆ ಕಾಣಿಸಿಕೊಂಡಿದ್ದರಿಂದ, ಅವರನ್ನು ವಿಚಾರಣೆಗಾಗಿ ಕರೆದೊಯ್ಯಲಾಯಿತು. ಈ ವೇಳೆ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ. ವೈದ್ಯಕೀಯ ವೆಚ್ಚ ಮತ್ತು ಇತರ ಪರಿಣಾಮಗಳ ಭಯದಿಂದ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

