

ಹಾಸನ: ಶಾಲಾ ಬಾಲಕಿಯೊಬ್ಬಳನ್ನು ಹಿಂಬಾಲಿಸಿ ಪೋಷಕರು ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದ ದುಷ್ಕರ್ಮಿಯನ್ನ ಪೆನ್ಷನ್ ಮೊಹಲ್ಲಾ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಬರುವಾಗ ಈ ಕಿಡಿಗೇಡಿ ಹಿಂಬಾಲಿಸಿದ್ದ. ಬಾಲಕಿ ರಸ್ತೆಯಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದರೂ ಸಹ, ಈತ ಆಕೆಯ ಬಿಡದೆ ಮನೆಬಾಗಿಲವರೆಗೂ ಬಂದಿದ್ದ. ಇದನ್ನ ಕಂಡ ಆಕೆಯ ತಾಯಿ ಕಿರುಚಿದ್ದು, ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದ.
ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಚ್ಚೆತ್ತ ಹಾಸನ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಿರಾತಕನ ಪತ್ತೆಗೆ ಬಲೆ ಬೀಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತಾಂತ್ರಿಕ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ವ್ಯಕ್ತಿಯನ್ನು ಸದ್ಯ ವಿಚಾರಣೆಗೆ ಒಳಪಡಿಸಲಾಗಿದೆ. ಈತ ಕೇವಲ ಈ ಬಾಲಕಿಯನ್ನು ಮಾತ್ರ ಹಿಂಬಾಲಿಸುತ್ತಿದ್ದನೇ ಅಥವಾ ಇತರ ಶಾಲಾ ಮಕ್ಕಳಿಗೂ ಇಂತಹ ಕಿರುಕುಳ ನೀಡುತ್ತಿದ್ದನೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ನ್ಷನ್ ಮೊಹಲ್ಲಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ಹಿನ್ನೆಲೆಯನ್ನು ಜಾಲಾಡುತ್ತಿದ್ದಾರೆ.
ಈತನ ಬಂಧನದಿಂದ ಹಾಸನ ನಗರದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ಶಾಲಾ ಆವರಣ ಮತ್ತು ರಸ್ತೆಗಳಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
Advertisement