ಬೆಂಗಳೂರಿಗರಿಗೆ ಮೈಸೂರಿನ ಮೈಲಾರಿ ದೋಸೆ ಸವಿಯುವ ಅವಕಾಶ: ಹೊಟೇಲ್ ಉದ್ಘಾಟಿಸಿ ಬ್ರೇಕ್ ಫಾಸ್ಟ್ ಸವಿದ ಸಿದ್ದರಾಮಯ್ಯ
ಹೊರಗಡೆ ಗರಿಗರಿ, ಒಳಗಡೆ ಮೃದುವಾಗಿ, ಬೆಣ್ಣೆಯ ಘಮದೊಂದಿಗೆ ಬಾಯಲ್ಲಿಟ್ಟರೆ ಕರಗುವಂತಹ ಮೈಸೂರಿನ ವಿಶ್ವವಿಖ್ಯಾತ ಒರಿಜಿನಲ್ 'ಮೈಲಾರಿ ದೋಸೆ'ಯ ರುಚಿ ಸವಿಯಲು ಇನ್ಮುಂದೆ ಮೈಸೂರಿಗೆ ಹೋಗಬೇಕಿಲ್ಲ.
ಮೈಸೂರಿನ 88 ವರ್ಷಗಳ ಇತಿಹಾಸವಿರುವ 'ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್' ಇಂದು ಬೆಂಗಳೂರಿನ ಇಂದಿರಾನಗರ 80 ಫೀಟ್ ರಸ್ತೆ ಯಲ್ಲೇ ಆರಂಭವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.
ಮೈಲಾರಿ ಇತಿಹಾಸ ಮತ್ತು ಹಿನ್ನೆಲೆ
1938ರಲ್ಲಿ ಸಚಿನ್ ಅವರ ಮುತ್ತಜ್ಜಿ ಗೌರಮ್ಮ ಅವರು ಈ ಪುಟ್ಟ ಹೋಟೆಲ್ ನ್ನು ಪ್ರಾರಂಭಿಸಿದರು. ಮೈಲಾರಿ (ಶಿವನ ಅವತಾರ) ದೇವರ ಭಕ್ತೆಯಾಗಿದ್ದ ಗೌರಮ್ಮ, ತಾವು ಮಾಡುವ ವಿಶೇಷ ದೋಸೆಗೆ ತಮ್ಮ ಇಷ್ಟದ ದೇವರ ಹೆಸರನ್ನೇ ಇಟ್ಟರು. ಹೀಗೆ 'ಮೈಲಾರಿ ದೋಸೆ'ಯ ಪಯಣ ಆರಂಭವಾಯಿತು. ಬೆಣ್ಣೆಯೊಂದಿಗೆ ಮಡಚಿದ ದೋಸೆ, ಅದರ ಜೊತೆಗೆ ತೆಂಗಿನಕಾಯಿಯ ಬಿಳಿ ಚಟ್ನಿ ಮತ್ತು ಸಾಗು ಕಾಂಬಿನೇಷನ್ ನಲ್ಲಿ ದೋಸೆಯನ್ನು ಸವಿಯಬಹುದು.
ಬೆಂಗಳೂರಿನ ಇಂದಿರಾನಗರದ 80 ಅಡಿ ರಸ್ತೆಯಲ್ಲಿ ಮೈಸೂರು ಅರಮನೆ ಥೀಮ್‌ನಲ್ಲಿ ಈ ಹೊಸ ರೆಸ್ಟೋರೆಂಟ್ ನಿರ್ಮಾಣವಾಗಿದೆ. ಮೈಸೂರಿನಲ್ಲಿ ಹಳೆಯ ಕಟ್ಟಡದಲ್ಲಿ ಕೇವಲ 20 ಜನರಿಗೆ ಆಸನ ವ್ಯವಸ್ಥೆಯಿದ್ದರೆ, ಬೆಂಗಳೂರಿನ ಶಾಖೆಯಲ್ಲಿ 150ಕ್ಕೂ ಹೆಚ್ಚು ಜನರು ಕುಳಿತು ಊಟ-ತಿಂಡಿ ಸವಿಯುವ ಅವಕಾಶವಿದೆ.
ಮೈಲಾರಿ ಹೊಟೇಲ್ ಮೆನು
ಮೈಸೂರಿನಲ್ಲಿ ದೋಸೆ, ಇಡ್ಲಿ, ಕಾಫಿ ಮತ್ತು ಕಾಶಿ ಹಲ್ವಾ ಮಾತ್ರ ಲಭ್ಯವಿದ್ದರೆ, ಬೆಂಗಳೂರಿನ ಶಾಖೆಯಲ್ಲಿ ವಿವಿಧ ರೀತಿಯ ಥಾಲಿಗಳು, ಉತ್ತರ ಭಾರತೀಯ ತಿನಿಸುಗಳು ಮತ್ತು ಚೈನೀಸ್ ಖಾದ್ಯಗಳೂ ಲಭ್ಯವಿರುತ್ತವೆ. ಆದರೆ, ನೆಲಮಹಡಿಯನ್ನು ಪ್ರತ್ಯೇಕವಾಗಿ 'ಮೈಲಾರಿ ದೋಸೆ'ಗಾಗಿಯೇ ಮೀಸಲಿಡಲಾಗಿದೆ ಎಂದು ಆಪರೇಷನಲ್ ಮ್ಯಾನೇಜರ್ ದೀಪುರಾಜ್ ತಿಳಿಸಿದ್ದಾರೆ.
ಸಿದ್ದರಾಮಯ್ಯನವರಿಗೆ ಅಚ್ಚುಮೆಚ್ಚು ಮೈಲಾರಿ ದೋಸೆ
ಮೈಸೂರಿನವರಾದ ಸಿಎಂ ಸಿದ್ದರಾಮಯ್ಯ, ಇಂದು ಹೊಟೇಲ್ ಉದ್ಘಾಟಿಸಿ, ಬೆಂಗಳೂರಿನಲ್ಲೂ ಮೈಸೂರಿನ ಅದೇ ರುಚಿ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಮೈಲಾರಿ ದೋಸೆಯನ್ನು ಕಾಲೇಜು ದಿನಗಳ ನೆನಪಿನೊಂದಿಗೆ ತಳುಕುಹಾಕಿ, ಇದು ತಮ್ಮ ನೆಚ್ಚಿನ ಖಾದ್ಯಗಳಲ್ಲಿ ಒಂದು ಎಂದು ಹೇಳಿದ್ದಾರೆ.
ಮೈಸೂರಿನ ಮೂಲ ಮೈಲಾರಿ ದೋಸೆಯ ರುಚಿಯೇ ಇಲ್ಲಿ ಸಿಗುತ್ತಿದೆ, ಹೀಗಾಗಿ ಮೈಸೂರಿಗೇ ಹೋಗಿ ತಿನ್ನಬೇಕೆಂದೇನು ಇಲ್ಲ ಎಂದು ದೋಸೆ ತಿನ್ನುತ್ತಾ ಸಿದ್ದರಾಮಯ್ಯ ಹೇಳಿದರು.
ಮೈಸೂರಿಗರು ಮಾತ್ರವಲ್ಲದೆ ಪ್ರವಾಸಿಗರು, ವಿದೇಶಿಯರು ಮತ್ತು ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿರುವ ಮೈಲಾರಿ ಹೋಟೆಲ್, ತನ್ನ ಪರಂಪರೆಯ ರುಚಿಯನ್ನು ಈಗ ಸಿಲಿಕಾನ್ ಸಿಟಿಯ ಜನರಿಗೂ ಉಣಬಡಿಸಲು ಸಜ್ಜಾಗಿದೆ.

