Students
ರಸ್ತೆಯಲ್ಲಿ ಮಾರಾಮಾರಿ ನಡೆಸುತ್ತಿರುವ ವಿದ್ಯಾರ್ಥಿಗಳು

ರ‍್ಯಾಗಿಂಗ್ ಪ್ರಶ್ನಿಸಿದ್ದಕ್ಕೆ ಕಾಲೇಜು ಸಿಬ್ಬಂದಿ-ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ: ವೀಡಿಯೋ ವೈರಲ್, 23 ಮಂದಿ ವಿರುದ್ಧ FIR ದಾಖಲು

ಜನವರಿ 14ರಂದು ಕೆಲ ಹಿರಿಯ ವಿದ್ಯಾರ್ಥಿಗಳು ಜೂನಿಯರ್‌ಗಳನ್ನು ಸಿಗರೇಟ್ ಹಾಗೂ ಪಾನೀಯಗಳನ್ನು ತರಲು, ತಮ್ಮ ಪುಸ್ತಕಗಳನ್ನು ಹೊತ್ತುಕೊಳ್ಳಲು ಬಲವಂತಪಡಿಸಿದ್ದಾರೆ ಎನ್ನಲಾಗಿದೆ.
Published on

ಬೆಂಗಳೂರು: ರ‍್ಯಾಗಿಂಗ್ ಮಾಡುವುದನ್ನು ಪ್ರಶ್ನಿಸಿದ ಕಾಲೇಜು ಸಿಬ್ಬಂದಿ ಹಾಗೂ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ನಡೆದಿದ್ದು, ಘಟನೆ ಸಂಬಂಧ 23 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಆಕಾಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಪ್ರವೇಶ ವಿಭಾಗದ ಮುಖ್ಯಸ್ಥ ಮಿಧುನ್ ಮಾಧವನ್ ಅವರು ನೀಡಿದ ದೂರಿನ ಆಧಾರದಲ್ಲಿ ಜನವರಿ 16ರಂದು ಪ್ರಕರಣ ದಾಖಲಾಗಿದೆ.

ಜನವರಿ 14ರಂದು ಕೆಲ ಹಿರಿಯ ವಿದ್ಯಾರ್ಥಿಗಳು ಜೂನಿಯರ್‌ಗಳನ್ನು ಸಿಗರೇಟ್ ಹಾಗೂ ಪಾನೀಯಗಳನ್ನು ತರಲು, ತಮ್ಮ ಪುಸ್ತಕಗಳನ್ನು ಹೊತ್ತುಕೊಳ್ಳಲು ಬಲವಂತಪಡಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಆತಂಕಗೊಂಡ ಜೂನಿಯರ್‌ಗಳು ಸಿಬ್ಬಂದಿ ಮಿಥುನ್ ಮಾಧವನ್ ಅವರನ್ನು ಸಂಪರ್ಕಿಸಿದ್ದು, ಅವರು ಹಿರಿಯರಿಗೆ ಎಚ್ಚರಿಕೆ ನೀಡಿ ಇಂತಹ ಕೃತ್ಯಗಳನ್ನು ಮರುಕಳಿಸದಂತೆ ಸೂಚಿಸಿದ್ದಾರೆ. ಆದರೆ ಎಚ್ಚರಿಕೆಯ ನಂತರವೂ ಜನವರಿ 15ರಂದು ಮತ್ತೆ ರ‍್ಯಾಗಿಂಗ್ ನಡೆದಿದ್ದು, ಜೂನಿಯರ್‌ಗಳು ಮತ್ತೊಮ್ಮೆ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಮಿಥುನ್ ಅವರು, ವಿಷಯವನ್ನು ನೇರವಾಗಿ ತಿಳಿಸಲು ಜೂನಿಯರ್ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಹಿಂಭಾಗದ ಚಹಾ ಅಂಗಡಿಯ ಬಳಿ ತೆರಳಿದ್ದಾರೆ.

ಸ್ಥಳಕ್ಕೆ ತೆರಳಿದಾಗ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಹಿರಿಯ ವಿದ್ಯಾರ್ಥಿಗಳು ಹೊರಗಿನವರೊಂದಿಗೆ ಸೇರಿಕೊಂಡು ಕಾಲೇಜು ಸಿಬ್ಬಂದಿ ಹಾಗೂ ಜೂನಿಯರ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಗೆ ರಾಡ್, ದೊಣ್ಣೆ ಹಾಗೂ ಕಲ್ಲುಗಳನ್ನು ಬಳಸಿದ್ದು, ಬೆದರಿಕೆ ಹಾಕಿದ್ದಾರೆಂದು ತಿಳಿಸಿದ್ದಾರೆ.

ದೂರು ಹಿನ್ನೆಲೆ ಪೊಲೀಸರು ಸೆಕ್ಷನ್ 115(2), 118(1) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚುವರಿಯಾಗಿ, ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಸೆಕ್ಷನ್ 116 ಮತ್ತು 137 ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

Students
Watch | Bike Taxi ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್; ರ‍್ಯಾಗಿಂಗ್: 22 ಕಾಲೇಜು ವಿದ್ಯಾರ್ಥಿಗಳ ವಿರುದ್ಧ FIR

ದೂರಿನ ಆಧಾರದ ಮೇಲೆ, ಪೊಲೀಸರು ಬಿಲಾಲ್, ಜಿರಿಲ್, ಮಿಶಾಲ್, ಅರ್ಜುನ್, ಆಂಟನಿ, ಎಡ್ರಿನ್, ಸರನ್, ಅದ್ಮಾನ್, ನೋಯೆಲ್, ಬೈಶುಧೇನ್, ಅಫೈಲ್, ಶಿಯಾಸ್, ನಿಶಾದ್, ಜುನೈದ್, ಜೈನೆಲ್, ಶಮೀಲ್, ಶನ್ನಿ, ಶುಹೈಬ್, ಬಿಂಟೊ, ಸಬಿತ್, ಆದಿತ್ಯರಾಜ್, ಮುಬಾಶಿರ್, ನವೀನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ಈ ವರೆಗೂ ಮೂವರನ್ನು ಬಂಧನಕ್ಕೊಳಪಡಿಸಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಬಂಧಿತರನ್ನು ಬಿಲಾಲ್, ನೌಶಾದ್ ಮತ್ತು ಅಫ್ಸಲ್ ಎಂದು ಗುರ್ತಿಸಲಾಗಿದೆ. ಹಲ್ಲೆಯಿಂದಾಗಿ ಮಿಥುನ್ ಮಾಧವನ್, ಕೃಷ್ಣಜೀತ್ ಮತ್ತು ಇತರ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com