

ಬೆಂಗಳೂರು: ನಾವು ಹೇಳಿದ್ದನ್ನೆಲ್ಲಾ ಮಾಡಿ ನುಡಿದಂತೆ ನಡೆದಿದ್ದೇವೆ. ಅವರು ಹೇಳಿದ್ದನ್ನು ಮಾಡದೆ ನಮ್ಮ ಬಗ್ಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದರು. ಹಾಕಿದ್ರಾ? ಎಂದು ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಅರ್ಹ ಫಲಾನುಭವಿಗಳಿಗೆ ನೂತನ ಮನೆಯ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.
ಕೊಳೆಗೇರಿ ಜನರೂ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ಇಷ್ಟು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಇರುವುದೇ ಬಡವರನ್ನು ಮುಖ್ಯವಾಹಿನಿಗೆ ತರಲು ಎಂದು ಹೇಳಿದರು.
ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕಾಂಗ್ರೆಸ್ ಸರ್ಕಾರ 14,58,000 ಮನೆಗಳನ್ನು ಕಟ್ಟಿ ವಸತಿ ಕ್ರಾಂತಿ ಮಾಡಿದ್ದೆವು. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ 2024 ರಲ್ಲಿ 36,789 ಮನೆಗಳನ್ನು ಮೊದಲನೇ ಹಂತದಲ್ಲಿ ವಿತರಿಸಿದ್ದ ನಮ್ಮ ಸರ್ಕಾರವು, ಈಗ ಎರಡನೇ ಹಂತದಲ್ಲಿ 45 ಸಾವಿರ ಮನೆಗಳನ್ನು ಹಂಚುತ್ತಿದೆ.
ನಾವು ಹೇಳಿದ್ದನ್ನೆಲ್ಲಾ ಮಾಡಿ ನುಡಿದಂತೆ ನಡೆದಿದ್ದೇವೆ. ಅವರು ಹೇಳಿದ್ದನ್ನು ಮಾಡದೆ ನಮ್ಮ ಬಗ್ಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದರು. ಹಾಕಿದ್ರಾ?
ಮಹದಾಯಿ, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ ಎಲ್ಲದರಲ್ಲೂ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಾತು ತಪ್ಪಿದೆ. ರಾಜ್ಯದ ಜನತೆಗೆ ವಂಚಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಇದಕ್ಕೆಲ್ಲಾ ಉತ್ತರಿಸಬೇಕು.
ಒಂದು ಮನೆಗೆ 4 ರಿಂದ 5 ಲಕ್ಷ ರೂಪಾಯಿಯನ್ನು ಕೊಡೋದು ರಾಜ್ಯ ಸರ್ಕಾರ. ಕೇಂದ್ರ ಸರ್ಕಾರ ಕೊಡೋದು ಒಂದು ಲಕ್ಷಕ್ಕಿಂತ ಕಡಿಮೆ. ಆದರೆ ಹೆಸರು ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆ. ಹಣ ನಮ್ಮದು ಅಂದರೆ ರಾಜ್ಯ ಸರ್ಕಾರದ್ದು. ಹೆಸರು ಮಾತ್ರ ಕೇಂದ್ರದ್ದು.ನಮ್ಮ ಸರ್ಕಾರ ಬಂದ ಬಳಿಕ 5,500 ಕೋಟಿ ರೂಪಾಯಿ ಹಣವನ್ನು ಎರಡು ವರ್ಷದಲ್ಲಿ ವಸತಿ ಯೋಜನೆಗಳಿಗಾಗಿ ಖರ್ಚು ಮಾಡಿದ್ದೇವೆ.
ಇಷ್ಟೆಲ್ಲಾ ಆದರೂ ಸರ್ಕಾರದ ಬೊಕ್ಕಸ ಖಾಲಿ ಎಂದು ಬಿಜೆಪಿ ಸುಳ್ಳು ಹಂಚುತ್ತಾ ತಿರುಗುತ್ತಿದೆ. ರೈತರ ಪಂಪ್ ಸೆಟ್ ಗಳಿಗೆ ರೂ.2,500 ಕೋಟಿ ಸಬ್ಸಿಡಿ ಪ್ರತಿ ವರ್ಷ ಕೊಡುತ್ತಿದ್ದೇವೆ. ಇದರ ಜೊತೆಗೆ ವಿಧವಾ ವೇತನ, ವೃದ್ದಾಪ್ಯ ವೇತನ ಸೇರಿ ಪ್ರತಿಯೊಂದಕ್ಕೂ ಹೇರಳವಾಗಿ ಹಣ ಬಿಡುಗಡೆ ಮಾಡುತ್ತಲೇ ಇದ್ದೇವೆ. ರಾಜ್ಯ ಮತ್ತು ನಮ್ಮ ಸರ್ಕಾರ ಎರಡೂ ಸದೃಢವಾಗಿದೆ ಎಂದು ತಿಳಿಸಿದರು.
Advertisement