

ಬೆಂಗಳೂರು: ದೆಹಲಿ ರೀತಿಯಲ್ಲೇ ಬೆಂಗಳೂರಿನ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ ಎಂಬ ವರದಿಗಳ ನಡುವೆಯೇ ಮಂಗಳವಾರ ಸಿಲಿಕಾನ್ ಸಿಟಿಯ ವಾಯುಗುಣಮಟ್ಟ ಗಣನೀಯವಾಗಿ ಚೇತರಿಸಿಕೊಂಡಿದೆ.
ಹೌದು.. ಕಳೆದ ಕೆಲ ವರ್ಷಗಳಿಂದಲೂ ಅಪಾಯಕಾರಿ ಮಟ್ಟದಲ್ಲೇ ಇದ್ದ ಬೆಂಗಳೂರು ವಾಯುಗುಣ ಮಟ್ಟ ಮಂಗಳವಾರ ಚೇತರಿಕೆ ಕಂಡಿದೆ.
ಬೆಂಗಳೂರು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ವಾಯುಗುಣಮಟ್ಟ ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಹಿಂದೆ ಬೆಂಗಳೂರಿನ ವಾಯುಗುಣಮಟ್ಟ 200ಕ್ಕೇರಿ ದೆಹಲಿ ಹಾದಿಯಲ್ಲೇ ಸಾಗುತ್ತಿದೆ ಎಂಬ ಟೀಕೆಗಳಿಗೆ ಗುರಿಯಾಗಿತ್ತು. ಇದಾದ ಬಳಿಕ ಕೆಲ ದಿನ ಸುಧಾರಿಸಿದಂತೆ ಕಂಡರೂ ಮತ್ತೊಮ್ಮೆ ಏರ್ ಕ್ವಾಲಿಟಿ ಕಳಪೆಯಾಗಿತ್ತು.
ಆದರೆ ಇದೀಗ ಕಳೆದ 2-3 ತಿಂಗಳಿಗೆ ಹೋಲಿಸಿದರೆ ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ.
ಮಂಗಳವಾರ ಬೆಂಗಳೂರಿನ ವಾಯುಗುಣಮಟ್ಟ 129 ಇದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಂದಿನ ಮಟ್ಟಿಗೆ ಗಣನೀಯ ಚೇತರಿಕೆಯಾಗಿದೆ. ಆದರೂ ಇಂದಿಗೂ ಗಾಳಿಯು ಕಲುಷಿತವಾಗಿಯೇ ಇದ್ದು, ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ವಾಯುಗುಣಮಟ್ಟ ಸಾಕಷ್ಟು ಚೇತರಿಕೆಯಲ್ಲಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಪೈಕಿ ಅತ್ಯಂತ ಕಳಪೆ ವಾಯುಗುಣಮಟ್ಟ ಹೊಂದಿರುವ ಜಿಲ್ಲೆಗಳ ಪೈಕಿ ಗಣಿ ಜಿಲ್ಲೆ ಬಳ್ಳಾರಿ (153) ಮಂಗಳೂರು (158), ಉಡುಪಿ (162) ಸ್ಥಾನಪಡೆದಿದೆ.
Advertisement