

ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಗೋವಿಂದಪುರ ಪೊಲೀಸರು ದೆಹಲಿಯಲ್ಲಿ ದುಬಾರಿ ಬೆಲೆಯ ಎಸ್‌ಯುವಿ ಕಾರುಗಳನ್ನು ಕದ್ದು ದಕ್ಷಿಣ ಭಾರತದಲ್ಲಿ ನಕಲಿ ದಾಖಲೆಗಳನ್ನು ಬಳಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಗೋವಿಂದಪುರ ಪೊಲೀಸರು ಬಯಲಿಗೆಳೆದಿದ್ದಾರೆ.
ಇಬ್ಬರನ್ನು ಬಂಧಿಸಿರುವ ಪೊಲೀಸರು 2.31 ಕೋಟಿ ಮೌಲ್ಯದ ಒಂಬತ್ತು ಕಾರುಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಫ್ರೇಜರ್ ಟೌನ್ ನಿವಾಸಿ ಮತ್ತು ಹೈದರಾಬಾದ್ ಮೂಲದ ಸೈಯದ್ ನಿಜಾಮ್ (37) ಮತ್ತು ತೆಲಂಗಾಣದ ಗೋಲ್ಕೊಂಡ ನಿವಾಸಿ ಮೊಹಮ್ಮದ್ ಮುಜಾಫರ್ (26) ಎಂದು ಗುರುತಿಸಲಾಗಿದೆ. ಇಬ್ಬರೂ ಕಾರು ಚಾಲಕರು ಮತ್ತು ಡೀಲರ್‌ಗಳಾಗಿದ್ದಾರೆ.
ಜನವರಿ 4 ರಂದು ಸ್ಕೂಟರ್ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸುವಾಗ, ಮರುದಿನ ಇಂದಿರಾ ಕ್ಯಾಂಟೀನ್ ಬಳಿ ಪೊಲೀಸರು ಸೈಯದ್ ನಿಜಾಮ್‌ನನ್ನು ಬಂಧಿಸಿ ವಶಕ್ಕೆ ಪಡೆದರು. ವಿಚಾರಣೆಯ ಸಮಯದಲ್ಲಿ, ದೆಹಲಿಯಲ್ಲಿರುವ ತನ್ನ ಸ್ನೇಹಿತ ಕಾರುಗಳನ್ನು ಕದ್ದು ದಕ್ಷಿಣ ಭಾರತದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲು ತನಗೆ ಒಪ್ಪಿಸುತ್ತಿದ್ದ ಎಂದು ಅವನು ಬಹಿರಂಗಪಡಿಸಿದ್ದಾನೆ.
ಜನವರಿ 14 ರಂದು ಹೈದರಾಬಾದ್‌ನಲ್ಲಿ ಬಂಧಿಸಲ್ಪಟ್ಟ ತನ್ನ ಸಹಚರ ಮೊಹಮ್ಮದ್ ಮುಜಾಫರ್‌ನ ಪಾತ್ರವನ್ನು ಅವನು ತಿಳಿಸಿದ್ದಾನೆ. ಕದ್ದ ಕಾರುಗಳನ್ನು ನಕಲಿ ದಾಖಲೆಗಳನ್ನು ಬಳಸಿ ಮಾರಾಟ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ದೆಹಲಿ ಮೂಲದ ಗ್ಯಾಂಗ್, ಗಾಜು ಒಡೆದು, ಕಾರುಗಳನ್ನು ಸ್ಟಾರ್ಟ್ ಮಾಡಲು ಅತ್ಯಾಧುನಿಕ ಯಂತ್ರಗಳನ್ನು ಬಳಸುವ ಮೂಲಕ ವಾಹನಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ವಾಹನಗಳನ್ನು ಬೆಂಗಳೂರಿಗೆ ರಸ್ತೆ ಮೂಲಕ ಸಾಗಿಸಲಾಯಿತು. ನಗರದ HBR ಮತ್ತು HBCS ಲೇಔಟ್‌ಗಳಲ್ಲಿನ ಖಾಲಿ ಜಾಗಗಳಲ್ಲಿ ಒಂಬತ್ತು ಕಾರುಗಳನ್ನು ನಿಲ್ಲಿಸಲಾಗಿತ್ತು, ಅವುಗಳನ್ನು ದ್ವಿಚಕ್ರ ವಾಹನದೊಂದಿಗೆ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಾಹನಗಳ ಒಟ್ಟು ಮೌಲ್ಯ 2.31 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ದೆಹಲಿಯಲ್ಲಿ ಕಾರುಗಳನ್ನು ಕಳವು ಮಾಡಲಾಗಿದ್ದು, ಅಲ್ಲಿ FIR ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರ ಪೊಲೀಸರು ಆರೋಪಿಗಳು ಮತ್ತು ಇತರ ವಿವರಗಳ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement