

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿಜೆ ರಾಯ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಹೊಸೂರು ರಸ್ತೆಯ ಲ್ಯಾಂಗ್ ಫರ್ಡ್ ಟೌನ್ ನಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಂಪನಿಯಲ್ಲಿ ಶೋಧ ನಡೆಸುತ್ತಿದ್ದರು. ಈ ವೇಳೆ ರಾಯ್ ಅವರು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಗುಂಡೇಟಿನ ಸದ್ದು ಕೇಳಿದ ಕೂಡಲೇ ಸಿಬ್ಬಂದಿ ಅವರ ಕೋಣೆಗೆ ಧಾವಿಸಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ರಾಯ್ ಅವರ ಕಚೇರಿಯಲ್ಲಿ ಐಟಿ ಶೋಧ ಕಾರ್ಯ ಸುಮಾರು ಎರಡು ತಿಂಗಳ ಹಿಂದೆ ಪ್ರಾರಂಭವಾಗಿತ್ತು ಎಂದು ಐಟಿ ಮೂಲಗಳು ತಿಳಿಸಿವೆ.
"ಇಂದು, ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಗುಂಡಿನ ದಾಳಿ ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ, ಕಾನ್ಫಿಡೆಂಟ್ ಗ್ರೂಪ್ ನ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿಜೆ ರಾಯ್ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆ. ಅವರ ಮೃತದೇಹ ಎಚ್ಎಸ್ಆರ್ ಲೇಔಟ್ ನ ನಾರಾಯಣ ಆಸ್ಪತ್ರೆಯಲ್ಲಿದೆ" ಎಂದು ಸಿಂಗ್ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಇಂದು ಮಧ್ಯಾಹ್ನ 3 ರಿಂದ 3.30 ರ ನಡುವೆ ಈ ಘಟನೆ ನಡೆದಿದೆ ಎಂದು ಆಯುಕ್ತರು ಹೇಳಿದ್ದಾರೆ.
ಈ ಸಂಬಂಧ ಕಾನ್ಫಿಡೆಂಟ್ ಗ್ರೂಪ್‌ನ ನಿರ್ದೇಶಕರು ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದರು.
"ನಮ್ಮ ಆರಂಭಿಕ ವರದಿಗಳ ಪ್ರಕಾರ, ಕಳೆದ ಮೂರು ದಿನಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಇಂದು ಸೇರಿದಂತೆ ಐ-ಟಿ ತಂಡ ಅವರನ್ನು ವಿಚಾರಣೆ ನಡೆಸುತ್ತಿದೆ. ಪೊಲೀಸ್ ತನಿಖೆಯಿಂದ ಮಾತ್ರ ನಿಜವಾಗಿಯೂ ಅಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಲು ಸಾಧ್ಯ" ಎಂದು ಸಿಂಗ್ ಹೇಳಿದರು.
ಈ ಪ್ರಕರಣವನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಬಹುದೇ ಎಂದು ಕೇಳಿದಾಗ, ದೂರಿನ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಕೇರಳದ ಐ-ಟಿ ತಂಡದ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಪೊಲೀಸರು ಇನ್ನೂ ಅವರೊಂದಿಗೆ ಮಾತನಾಡಿಲ್ಲ ಎಂದು ಸಿಂಗ್ ತಿಳಿಸಿದರು.
"ಪ್ರಸ್ತುತ, ಯಾವುದೇ ಐ-ಟಿ ಅಧಿಕಾರಿಗಳು ಸ್ಥಳದಲ್ಲಿ ಇಲ್ಲ. ನಾವು ಅವರೊಂದಿಗೆ ಮಾತನಾಡುತ್ತೇವೆ" ಎಂದು ಅವರು ಹೇಳಿದರು.
ರಾಯ್ ಅವರ ಕುಟುಂಬ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಇಂದು ರಾತ್ರಿ ಇಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
Advertisement