ಎಲ್ಲಾ ಅನುಮತಿ ಸಿಕ್ಕ ಬಳಿಕವೇ ಶರಾವತಿ ಯೋಜನೆ ಆರಂಭ, ಆತಂಕ ಬೇಡ: ಸಚಿವ ಕೆ.ಜೆ. ಜಾರ್ಜ್

ಇದು ಯಾರ ಮನಸ್ಸಿಗೆ ಬಂದಂತೆ ಮಾಡುವ ಯೋಜನೆಯಲ್ಲ. ಇಂದು ತೀರ್ಮಾನ ಮಾಡಿ ನಾಳೆಯೇ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ.
K J George
ಇಂಧನ ಸಚಿವ ಕೆ.ಜೆ. ಜಾರ್ಜ್
Updated on

ಶಿವಮೊಗ್ಗ: ರಾಜ್ಯದ ಮಹತ್ವಾಕಾಂಕ್ಷೆಯ ಶರಾವತಿ ಪಂಪ್ಡ್ ಸ್ಟೋರೇಜ್ (Sharavathi Pumped Storage Project) ಯೋಜನೆಗೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಟೀಕೆಗಳು ಮತ್ತು ಆತಂಕಗಳಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

ಪರಿಸರ ಹಾಗೂ ಕಾನೂನುಬದ್ಧ ಎಲ್ಲ ಅನುಮತಿಗಳು ದೊರೆಯುವವರೆಗೆ ಯೋಜನೆಯ ಯಾವುದೇ ಕಾಮಗಾರಿ ಆರಂಭಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದು ಯಾರ ಮನಸ್ಸಿಗೆ ಬಂದಂತೆ ಮಾಡುವ ಯೋಜನೆಯಲ್ಲ. ಇಂದು ತೀರ್ಮಾನ ಮಾಡಿ ನಾಳೆಯೇ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಅರಣ್ಯ ಇಲಾಖೆ ಹಾಗೂ ಸಂಬಂಧಿತ ರಾಷ್ಟ್ರೀಯ ಸಂಸ್ಥೆಗಳಿಂದ ಅಗತ್ಯ ಅನುಮತಿ ಪಡೆಯುವುದು ಕಡ್ಡಾಯ.

ತಜ್ಞರ ತಂಡಗಳು ಈಗಾಗಲೇ ಯೋಜನೆಯ ವಿವಿಧ ಅಂಶಗಳನ್ನು ಪರಿಶೀಲಿಸುತ್ತಿವೆ. ಎಲ್ಲ ಅನುಮತಿಗಳು ದೊರೆತ ನಂತರವೇ ನಿರ್ಮಾಣ ಕಾರ್ಯ ಆರಂಭವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಯೋಜನೆಗೆ ಸಂಬಂಧಿಸಿದ ಪರಿಸರದ ಪರಿಣಾಮ, ಅರಣ್ಯ ಪ್ರದೇಶದ ಸಂರಕ್ಷಣೆ ಹಾಗೂ ಕಾನೂನುಬದ್ಧ ನಿಯಮಗಳ ಪಾಲನೆ ಕುರಿತು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

K J George
ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ: ವಿದ್ಯುತ್ ಪೂರೈಕೆಗೆ ಇಂತಹ ಯೋಜನೆ ಅಗತ್ಯ ಎಂದ ಡಿಕೆಶಿ; ಸಚಿವ ಮಂಕಾಳ್ ವೈದ್ಯ ಮೌನ ಪ್ರಶ್ನಿಸಿದ BJP

ಇದೇ ವೇಳೆ ಗೃಹ ಜ್ಯೋತಿ (Gruha Jyothi) ಯೋಜನೆ ಕುರಿತು ಮಾತನಾಡಿದ ಸಚಿವರು, ಯೋಜನೆಯ ನಿಜವಾದ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಯಲಿದೆ ಎಂದು ಹೇಳಿದರು.

ಯೋಜನೆಯ ಲಾಭವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರನ್ನು ಮಾತ್ರ ಗುರುತಿಸಿ ಹೊರಗಿಡಲಾಗುತ್ತಿದೆ. ಅರ್ಹ ಕುಟುಂಬಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಿಜವಾದ ಫಲಾನುಭವಿಗಳು ಉಚಿತ ವಿದ್ಯುತ್ ಸೌಲಭ್ಯವನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ," ಎಂದು ತಿಳಿಸಿದರು.

ವಿದ್ಯುತ್ ವಿತರಣಾ ಸಂಸ್ಥೆಗಳ ಖಾಸಗೀಕರಣದ ವಿರುದ್ಧ ರೈತ ಸಂಘಟನೆಗಳು ವ್ಯಕ್ತಪಡಿಸಿರುವ ಆತಂಕದ ಕುರಿತು ಪ್ರತಿಕ್ರಿಯಿಸಿದ ಸಚಿವರು, "ವಿದ್ಯುತ್ ವಿತರಣೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯನ್ನು 2003ರಲ್ಲಿ ಬಿಜೆಪಿ ಸರ್ಕಾರವೇ ಮುಂದಿಟ್ಟಿತ್ತು. ಆದರೆ, ಕರ್ನಾಟಕ ಸರ್ಕಾರ ಆ ದಾರಿಯಲ್ಲಿ ಸಾಗುವುದಿಲ್ಲ. ಮುಖ್ಯಮಂತ್ರಿ ಈಗಾಗಲೇ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ನಾನೂ ಮತ್ತೊಮ್ಮೆ ಹೇಳುತ್ತಿದ್ದೇನೆ, ವಿದ್ಯುತ್ ವಿತರಣಾ ಸಂಸ್ಥೆಗಳ ಖಾಸಗೀಕರಣಕ್ಕೆ ನಮ್ಮ ಸರ್ಕಾರದ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಕ್ಷೇತ್ರದಲ್ಲಿ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲಿದ್ದು, ರೈತರು ಹಾಗೂ ಸಾಮಾನ್ಯ ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com