

ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯಾಚರಣೆಯಡಿ ಮನೆ ಮನೆಗೆ ತೆರಳಿ ಮತದಾರರ ವಿವರ ಸಂಗ್ರಹಣೆ ನಡೆಸುವಂತೆ ಮುಖ್ಯ ಚುನಾವಣಾಧಿಕಾರಿ ಕೆ. ಆರ್. ಅನ್ಬುಕುಮಾರ್ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ನಿರ್ದೇಶನ ನೀಡಿದರು.
ಈ ನಡುವೆ, ಸಾಮೂಹಿಕ ನೋಂದಣಿ ಶಿಬಿರಗಳ ಮೂಲಕ ಅಕ್ರಮ ವಲಸಿಗರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಮನೆ ಮನೆಗೆ ತೆರಳುವ ಬದಲು ಸಾಮೂಹಿಕ ನೋಂದಣಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ತೋರಿಸುವ ಹೊಸ ವಿಡಿಯೊಗಳನ್ನು ಬಿಜೆಪಿ ಮತ್ತು ಜೆಡಿಎಸ್ ಬಿಡುಗಡೆ ಮಾಡಿವೆ. ಜಯನಗರ, ಮಹದೇವಪುರ, ಬ್ಯಾಟರಾಯನಪುರ, ಚಾಮರಾಜಪೇಟೆ, ಯಶವಂತಪುರ, ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ವಿಜಯಪುರ ಸೇರಿದಂತೆ ಹಲವು ಕಡೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡದೆ, ಕಚೇರಿಗಳಿಂದಲೇ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ ಎಂದು ಅನ್ಬುಕುಮಾರ್ ಹೇಳಿದ್ದಾರೆ. ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು ಬಿಎಲ್‌ಒಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸುವುದನ್ನು ಖಚಿತಪಡಿಸಬೇಕು ಹಾಗೂ ಭಾರತ ಚುನಾವಣಾ ಆಯೋಗದ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಇದೇ ವೇಳೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದು, ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಡ್ಡಾಯವಾಗಿರುವ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವ ಬದಲು, ಹಲವು ಕಡೆಗಳಲ್ಲಿ ಸಮುದಾಯ ಭವನಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಂತಹ ಶಿಬಿರಗಳ ವಿಡಿಯೊಗಳನ್ನು ಬಿಡುಗಡೆ ಮಾಡಿದ ಶೋಭಾ ಕರಂದ್ಲಾಜೆ, ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಕಾನೂನುಬದ್ಧಗೊಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್, ಕರ್ನಾಟಕದಲ್ಲಿ 20 ಲಕ್ಷ ಬಾಂಗ್ಲಾದೇಶದ ಅಕ್ರಮ ವಲಸಿಗರು ಇದ್ದಾರೆ ಎಂದು ಆರೋಪಿಸಿದರು.
ಅವರಿಗಾಗಿ ಕಾಂಗ್ರೆಸ್ ವಿಶೇಷ ಹೆದ್ದಾರಿಯನ್ನೇ ನಿರ್ಮಿಸುತ್ತಿದೆ. ಹಜ್ ಭವನಗಳು ಮತ್ತು ಮಸೀದಿಗಳ ಸಮೀಪ ಅವರ ನೋಂದಣಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಮಹದೇವಪುರ ಮತ್ತು ಬ್ಯಾಟರಾಯನಪುರದಲ್ಲಿ ಮಸೀದಿಗಳ ಎದುರು ಗುಂಪುಗಳು ಕುಳಿತು ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿವೆ ಎಂದೂ ಅವರು ಆರೋಪಿಸಿದರು.
ಪ್ರತಿಪಕ್ಷಗಳ ಆರೋಪಗಳನ್ನು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ತಳ್ಳಿಹಾಕಿದ್ದಾರೆ. ಬಿಎಲ್‌ಒಗಳು ಮನೆ ಮನೆಗೆ ತೆರಳುತ್ತಿದ್ದಾರೆ. ಅಲ್ಲಲ್ಲಿ ನಡೆದಿರುವ ಕೆಲವೇ ಕೆಲವು ಘಟನೆಗಳನ್ನು ಸಾಮಾನ್ಯೀಕರಿಸುವುದು ಸರಿಯಲ್ಲ. ಬಿಜೆಪಿ ಇದನ್ನು ಕೋಮು ವಿಚಾರವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಸಮಾಜದ ಎಲ್ಲ ವರ್ಗಗಳ ಮತದಾರರಿಗೆ ನೆರವು ನೀಡುವಂತೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇವೆ ಎಂದು ಸಲೀಂ ಅಹ್ಮದ್ ಹೇಳಿದರು.