

ಮಂಡ್ಯ: ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಹಿರಿಯ ಶಾಸಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.
ಶನಿವಾರ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯದಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದ್ದರೂ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
"ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಒಂದೇ ತಿಂಗಳಲ್ಲಿ ರಾಜ್ಯದ ಜಲಾಶಯಗಳು ಬರಿದಾಗಿವೆ. ಕೆಆರ್‌ಎಸ್‌ನಲ್ಲಿ ಈಗ ಕೇವಲ 6 ಟಿಎಂಸಿ ಅಡಿ ನೀರು ಮಾತ್ರ ಉಳಿದಿದೆ. ಒಳಹರಿವು ಸುಮಾರು 900 ಕ್ಯೂಸೆಕ್ ಇದ್ದರೂ ಹೊರಹರಿವಿನ ಬಗ್ಗೆ ಅನುಮಾನಗಳಿವೆ" ಎಂದು ಹೇಳಿದರು.
ರಾಜ್ಯದ ರೈತರು ಈಗಾಗಲೇ 1 ಲಕ್ಷ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ಈಗ ಮುಖ್ಯಮಂತ್ರಿ ನೀರಿನ ಕೊರತೆ ಕಾರಣ ನೀಡಿ, ಬೆಳೆ ಬೆಳೆಯಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
"ಈ ಹಿಂದೆ ಪ್ರಧಾನಿ ಮೋದಿ ನೀರು ಉಳಿಸುವಂತೆ ಕರೆ ನೀಡಿದಾಗ ಕಾಂಗ್ರೆಸ್ ಟೀಕಿಸಿತ್ತು. ಈಗ ಅದೇ ಕಾಂಗ್ರೆಸ್ ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಹೇಳುತ್ತಿದೆ. ಧೈರ್ಯವಿದ್ದರೆ ತಮಿಳುನಾಡಿನ ರೈತರೂ ಬೆಳೆ ಬೆಳೆಯಬಾರದು ಎಂದು ಹೇಳಲಿ ಎಂದು ಸವಾಲು ಹಾಕಿದರು.
ಮೇಕೆದಾಟು ಜಲಾಶಯ ಯೋಜನೆ ಕುರಿತು ಮಾತನಾಡಿ, ತಮಿಳುನಾಡು ವಿಧಾನಸಭೆ ಯೋಜನೆಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿದ್ದರೂ, ಕರ್ನಾಟಕ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.
"ತಮಿಳುನಾಡಿನಲ್ಲಿರುವ ತಮ್ಮ ಮೈತ್ರಿ ಪಕ್ಷವನ್ನು ಸಂತೋಷಪಡಿಸಲು ಕಾಂಗ್ರೆಸ್ ಕರ್ನಾಟಕದ ರೈತರಿಗೆ ಅನ್ಯಾಯ ಮಾಡುತ್ತಿದೆ" ಎಂದು ದೂರಿದರು.
ಈವರೆಗೆ ಕೇವಲ 5 ಶೇಕಡಾ ಬಿತ್ತನೆ ಮಾತ್ರ ನಡೆದಿದೆ ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ಆದರೆ, ರೈತರ ಪ್ರತಿನಿಧಿಗಳ ಸಭೆ ಕರೆದು ಬೆಳೆ ಮಾದರಿ ಹಾಗೂ ಬರ ಪರಿಸ್ಥಿತಿಯ ಕುರಿತು ಚರ್ಚಿಸದಿರುವುದು ಸರ್ಕಾರದ ವೈಫಲ್ಯ ಎಂದು ಕಿಡಿಕಾರಿದ್ದಾರೆ ವ.
"ಮಳೆಯ ಕೊರತೆ, ರೈತರ ಸಂಕಷ್ಟದ ಬಗ್ಗೆ ಚರ್ಚಿಸಬೇಕಾದ ಸರ್ಕಾರ ಸುರಂಗ ರಸ್ತೆ, ಕಸ ನಿರ್ವಹಣೆ ಯೋಜನೆಗಳ ಟೆಂಡರ್ ಕರೆಯುವುದರಲ್ಲಿ ಬ್ಯುಸಿಯಾಗಿದೆ. ರಾಜ್ಯಕ್ಕೆ ಇನ್ನೂ ಕೃಷಿ ಸಚಿವರೇ ಇಲ್ಲ. ದೆಹಲಿಯಿಂದ ಅನುಮತಿ ಬರಲು ಕಾಯುತ್ತಿದ್ದಾರೆಯೇ?" ಎಂದು ವ್ಯಂಗ್ಯವಾಡಿದರು.
ಸರ್ಕಾರ ರೈತರಿಗೆ ಪರ್ಯಾಯ ಬೆಳೆ ಬೆಳೆಯುವಂತೆ ಸಲಹೆ ನೀಡುತ್ತಿದೆ. ಆದರೆ, ಪರಿಹಾರದ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ, "ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ದುಪ್ಪಟ್ಟು ಪರಿಹಾರ ಕೇಳುತ್ತಿತ್ತು. ಈಗ ನಾವು ಪ್ರತಿ ಎಕರೆಗೆ ರೂ50 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದೇವೆ" ಎಂದರು.
ಮುಖ್ಯಮಂತ್ರಿ ಸ್ವತಃ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಘೋಷಿಸಬೇಕು. ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಲಾಠಿ ಚಾರ್ಜ್ ನಡೆಸುತ್ತಿರುವ ಸರ್ಕಾರದ ಕ್ರಮವನ್ನೂ ಅಶೋಕ್ ಖಂಡಿಸಿದರು.
"ರೈತರು ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸಿದರೆ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಗುತ್ತಿದೆ. ಇಂತಹ ಆಡಳಿತ ಹೆಚ್ಚು ದಿನ ಉಳಿಯುವುದಿಲ್ಲ" ಎಂದು ಕಿಡಿಕಾರಿದರು.
ಬಳಿಕ ಬಿಡದಿಯಲ್ಲಿ 3,500 ಎಕರೆ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ ಅಶೋಕ್ ಅವರು, "ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಉದ್ಯಮಿ ಎಂದು ಹೇಳಿಕೊಳ್ಳುತ್ತಾರೆ. ಹೀಗಾಗಿ ಅವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ" ಎಂದು ಟೀಕಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ಭರ್ತಿ ಮಾಡಲು ಸಾರ್ವಜನಿಕರಿಗೆ ನೆರವಾಗಬೇಕು ಎಂದರು.
"ಬಾಂಗ್ಲಾದೇಶ ಮತ್ತು ಪಾಕಿಸ್ತಾನದವರ ಅನುಕೂಲಕ್ಕಾಗಿ ಮಸೀದಿಗಳಲ್ಲಿ ಅರ್ಜಿ ಭರ್ತಿ ಮಾಡುವ ಪದ್ಧತಿಯನ್ನು ನಾನು ವಿರೋಧಿಸಿದ್ದೇನೆ. ಈ ಬಗ್ಗೆ ನನ್ನ ಆಕ್ಷೇಪವನ್ನು ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ" ಎಂದು ಹೇಳಿದರು.