Mallalli Falls: ಜಲಪಾತದಲ್ಲಿ ಮೈಮರೆತು ವಿದ್ಯಾರ್ಥಿಗಳ ಆಟ; ಸ್ವಲ್ಪದರಲ್ಲೆ ಸಾವಿನ ದವಡೆಯಿಂದ ಪಾರು; Video

ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳನ್ನು ಗಣೇಶ್ ನಾಯಕ್ (21ವ) ಮತ್ತು ಸಂತೋಷ್ ಕುಮಾರ್ (23ವ) ಎಂದು ಗುರುತಿಸಲಾಗಿದ್ದು, ಇಬ್ಬರೂ ಆಂಧ್ರಪ್ರದೇಶ ನಿವಾಸಿಗಳಾಗಿದ್ದಾರೆ. ಅವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸದ ಅಂಗವಾಗಿ ಮಲ್ಲಳ್ಳಿ ಜಲಪಾತಕ್ಕೆ ಭೇಟಿ ನೀಡಿದ್ದರು.
Two Andhra students rescued after being stranded at Mallalli falls
ಸೆಲ್ಫಿ ಕ್ರೇಜ್ ನಲ್ಲಿ ಜಲಪಾತಕ್ಕೆ ಇಳಿದು ವಿದ್ಯಾರ್ಥಿಗಳ ಸುರಕ್ಷತೆ
Updated on

ಮಡಿಕೇರಿ: ಕೊಡಗು ಜಿಲ್ಲೆಯ ಜನಪ್ರಿಯ ಮಲ್ಲಳ್ಳಿ ಜಲಪಾತದಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ನಿನ್ನೆ ಸೋಮವಾರ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಕುಮಾರಧಾರಾ ಹೊಳೆಯಲ್ಲಿ ಏಕಾಏಕಿ ಏರಿದ ನೀರಿನ ಮಟ್ಟದಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ನಡೆಸಿದ ಸಮಯೋಚಿತ ಕಾರ್ಯಾಚರಣೆಯಲ್ಲಿ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳನ್ನು ಗಣೇಶ್ ನಾಯಕ್ (21ವ) ಮತ್ತು ಸಂತೋಷ್ ಕುಮಾರ್ (23ವ) ಎಂದು ಗುರುತಿಸಲಾಗಿದ್ದು, ಇಬ್ಬರೂ ಆಂಧ್ರಪ್ರದೇಶ ನಿವಾಸಿಗಳಾಗಿದ್ದಾರೆ. ಅವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸದ ಅಂಗವಾಗಿ ಮಲ್ಲಳ್ಳಿ ಜಲಪಾತಕ್ಕೆ ಭೇಟಿ ನೀಡಿದ್ದರು.

ಜಲಪಾತದ ಬಳಿ ಅಳವಡಿಸಲಾಗಿದ್ದ ಸುರಕ್ಷತಾ ತಡೆಗೋಡೆಗಳನ್ನು ಲೆಕ್ಕಿಸದೆ ಇಬ್ಬರೂ ಹೊಳೆಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದರು. ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುವ ಕಾತರದಲ್ಲಿದ್ದರು. ಇದೇ ವೇಳೆ ಮೇಲ್ಭಾಗದಲ್ಲಿರುವ ಜಲವಿದ್ಯುತ್ ಕೇಂದ್ರದಿಂದ ನೀರನ್ನು ಬಿಡುಗಡೆ ಮಾಡಲಾಯಿತು. ನೀರು ಬಿಡುವ ಮೊದಲು ಕಡ್ಡಾಯವಾಗಿ ಎಚ್ಚರಿಕೆ ಸೈರನ್ ಮೊಳಗಿಸಲಾಗಿದ್ದರೂ, ಆಟದಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿಗಳು ಅದನ್ನು ಗಮನಿಸಲಿಲ್ಲ.

ಕೆಲವೇ ನಿಮಿಷಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿ, ನೀರಿನ ಹರಿವು ಅಪಾಯಕಾರಿಯಾಗಿ ಮಾರ್ಪಟ್ಟ ಪರಿಣಾಮ ಇಬ್ಬರೂ ಹೊಳೆಯ ಮಧ್ಯದಲ್ಲಿ ಸಿಲುಕಿಕೊಂಡರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ಹೊಳೆಯ ಮಧ್ಯದಲ್ಲಿದ್ದ ದೊಡ್ಡ ಬಂಡೆಯೊಂದನ್ನು ಹಿಡಿದುಕೊಂಡು ಸುಮಾರು ಒಂದು ಗಂಟೆ ಕಾಲ ಅಲ್ಲೇ ಸಿಲುಕಿದ್ದರು.

ಈ ಘಟನೆ ಸ್ಥಳೀಯ ಗ್ರಾಮಸ್ಥರ ಗಮನಕ್ಕೆ ಬಂದ ತಕ್ಷಣ ಅವರು ಜಲವಿದ್ಯುತ್ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಿ, ತಾತ್ಕಾಲಿಕವಾಗಿ ನೀರು ಬಿಡುವುದನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ಇದೇ ವೇಳೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೂ ಮಾಹಿತಿ ನೀಡಲಾಯಿತು.

ತಕ್ಷಣವೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡವು ಸ್ಥಳೀಯರ ಸಹಾಯದೊಂದಿಗೆ ಕಾರ್ಯಾಚರಣೆ ಆರಂಭಿಸಿತು. ಹಗ್ಗಗಳು ಹಾಗೂ ಇತರ ರಕ್ಷಣಾ ಸಾಧನಗಳನ್ನು ಬಳಸಿಕೊಂಡು, ತೀವ್ರ ಹರಿವಿನ ನಡುವೆಯೂ ಅಗ್ನಿಶಾಮಕ ಸಿಬ್ಬಂದಿ ಹೊಳೆಯ ಮಧ್ಯೆ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು.

Two Andhra students rescued after being stranded at Mallalli falls
ಜೀವಕ್ಕೆ ಎರವಾದ ಸೆಲ್ಫಿ ಕ್ರೇಜ್: ಕಾಳಿನದಿಗೆ ಬಿದ್ದು ಸ್ನೇಹಿತರಿಬ್ಬರು ನಾಪತ್ತೆ!

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗಳಾದ ಪವನ್ ಕುಮಾರ್, ಪಿ.ಎಸ್. ನಾಗೇಶ್, ಲತೇಶ್ ಕುಮಾರ್, ಪ್ರಶಾಂತ್ ಹಾಗೂ ವಿನಿ ಕುಮಾರ್ ಭಾಗಿಯಾಗಿದ್ದರು. ಅವರ ತ್ವರಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಪ್ರಾಣಾಪಾಯ ತಪ್ಪಿತು.

ಬಳಿಕ ಇಬ್ಬರು ವಿದ್ಯಾರ್ಥಿಗಳನ್ನು ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪ್ರಕಾರ, ಇಬ್ಬರೂ ಸ್ಥಿರವಾಗಿದ್ದು ಯಾವುದೇ ಗಂಭೀರ ಗಾಯಗಳಾಗಿಲ್ಲ.

ಘಟನೆಯ ಬಳಿಕ ಅಧಿಕಾರಿಗಳು ಮತ್ತೊಮ್ಮೆ ಪ್ರವಾಸಿಗರಿಗೆ ಮನವಿ ಮಾಡಿದ್ದು, ವಿಶೇಷವಾಗಿ ಮಳೆಗಾಲದಲ್ಲಿ ಜಲಪಾತಗಳು ಮತ್ತು ನದಿಗಳ ಬಳಿ ಅಳವಡಿಸಿರುವ ಸುರಕ್ಷತಾ ತಡೆಗೋಡೆಗಳನ್ನು ದಾಟಬಾರದು ಹಾಗೂ ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಮೇಲ್ಭಾಗದಿಂದ ನೀರು ಏಕಾಏಕಿ ಬಿಡುಗಡೆಯಾಗುವುದರಿಂದ ನೀರಿನ ಮಟ್ಟ ಕ್ಷಣಾರ್ಧದಲ್ಲಿ ಏರಿಕೆಯಾಗುವ ಸಾಧ್ಯತೆ ಇರುವುದರಿಂದ, ಎಚ್ಚರಿಕೆ ಸೈರನ್‌ಗಳು ಮತ್ತು ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com