

ಬೆಂಗಳೂರು: ಇಂದು ಗುರುವಾರ ಬೆಳಗ್ಗೆ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ (Bengaluru Metro Green Line) ತಾಂತ್ರಿಕ ಸಮಸ್ಯೆಯಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಕಟಣೆ ಹೊರಡಿಸಿ, “ತಾಂತ್ರಿಕ ಸಮಸ್ಯೆಯನ್ನು ನಮ್ಮ ತಾಂತ್ರಿಕ ತಂಡ ಆದ್ಯತೆಯ ಮೇರೆಗೆ ಪರಿಹರಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಸಾಮಾನ್ಯ ಸೇವೆಯನ್ನು ಪುನಃ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ,” ಎಂದು ತಿಳಿಸಿದೆ.
ವಿಳಂಬದ ನಿಖರ ಅವಧಿಯ ಬಗ್ಗೆ ಬಿಎಂಆರ್‌ಸಿಎಲ್ ಯಾವುದೇ ಅಧಿಕೃತ ಮಾಹಿತಿ ನೀಡದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು 20 ರಿಂದ 30 ನಿಮಿಷಗಳವರೆಗೆ ರೈಲುಗಾಗಿ ಕಾಯಬೇಕಾಯಿತು.
ಪ್ರಯಾಣಿಕ ಗೌತಮ್ ರಮೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಮತ್ತೊಮ್ಮೆ ನಮ್ಮ ಮೆಟ್ರೋ ಸ್ಥಗಿತಗೊಂಡಿದೆ. ಕೋಣನಕುಂಟೆಯಲ್ಲಿ 30 ನಿಮಿಷಗಳಿಂದ ರೈಲು ಇಲ್ಲ. ಎಂದಿನಂತೆ ಯಾವುದೇ ಪ್ರಕಟಣೆ ಕೂಡ ಇಲ್ಲ. ಇಡೀ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ,” ಎಂದು ಬರೆದುಕೊಂಡಿದ್ದಾರೆ.
ಇನ್ನೋರ್ವ ಪ್ರಯಾಣಿಕರು, “ಕಳೆದ 20 ನಿಮಿಷಗಳಿಂದ ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ಬೆಂಗಳೂರು ಮೆಟ್ರೋ ಅಧಿಕಾರಿಗಳಿಂದ ಯಾವುದೇ ಪ್ರಕಟಣೆ ಅಥವಾ ಮಾಹಿತಿ ನೀಡಲಾಗಿಲ್ಲ. ಮೆಟ್ರೋ ಕಾರ್ಯಾಚರಣೆಯಲ್ಲಿ ಇದು ಮತ್ತೊಂದು ವೈಫಲ್ಯ. ಪ್ರತಿದಿನ ಪ್ರಯಾಣಿಸುವವರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.