

ಬೆಂಗಳೂರು: ಪ್ರೀತಿ ನಿರಾಕರಿಸಿ ಬೇರೆ ಯುವಕನೊಂದಿಗೆ ಮದುವೆಯಾಗಿದ್ದ ಪ್ರೇಯಸಿಯನ್ನು ಭಗ್ನಪ್ರೇಮಿಯೋರ್ವ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಮಗೊಂಡನಹಳ್ಳಿ ನಿವಾಸಿ ನಂದಿನಿ ದಾಸ್ (18) ಚಾಕು ಇರಿತಕ್ಕೊಳಗಾದ ಯುವತಿ. ಕೃತ್ಯವೆಸಗಿದ ಬಳಿಕ ನವಾಜ್ (18) ಎಂಬಾತ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಸಂತ್ರಸ್ಥೆ ನಂದಿನಿ ಚಿಕಿತ್ಸೆ ಪಡೆಯುತ್ತಿದ್ದರೆ ಆರೋಪಿ ನವಾಜ್ ನನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಜುಲೈ 9ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ರಾಮಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ. ಯುವತಿ ತಂದೆ ಯಾದವ್ ದಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆಗಿದ್ದೇನು?
ಪಶ್ಚಿಮ ಬಂಗಾಳದ ಯಾದವ್ ದಾಸ್ ಕೆಲ ವರ್ಷಗಳಿಂದ ನಗರದ ರಾಮಗೊಂಡನಹಳ್ಳಿ ಕುಟುಂಬ ಸಮೇತ ವಾಸವಾಗಿದ್ದಾರೆ. ಯುವತಿ ತಂದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಮನೆಗೆಲಸ ಮಾಡುತ್ತಿದ್ದರು. ಇಬ್ಬರು ಸಹೋದರರೊಂದಿಗೆ ಯುವತಿ ವಾಸವಾಗಿದ್ದರು. ನಲ್ಲೂರು ಹಳ್ಳಿಯ ಖಾಸಗಿ ಶಾಲೆಯಲ್ಲಿ ನಂದಿನಿ ದಾಸ್ ಓದುತ್ತಿದ್ದ ವೇಳೆ ಬಂದೆ ನವಾಜ್ ಪರಿಚಯವಾಗಿದೆ.
ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಮಧ್ಯೆ ಆರೋಪಿ ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸಿ ನಲ್ಲೂರು ಹಳ್ಳಿಯಲ್ಲಿ ಟಾಟಾ ಏಸ್ ವಾಹನದ ಚಾಲಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
'ನನ್ನ ಬಿಟ್ಟು ಯಾರನ್ನೂ ಮದುವೆ ಆಗಬಾರದು'
ಕೆಲ ದಿನಗಳ ಹಿಂದೆ ನಂದಿನಿದಾಸ್‌ಗೆ ಬೇರೆ ಯುವಕನ ಜತೆ ಮದುವೆಯಾಗಿತ್ತು. ಈ ವಿಚಾರ ತಿಳಿದ ಆರೋಪಿ ಬೆಳಿಗ್ಗೆ ಯುವತಿ ಮನೆಗೆ ಬಂದು, ಇಬ್ಬರು ಸಹೋದರನನ್ನು ಕೋಣೆಯಲ್ಲಿ ಕೂಡಿಹಾಕಿದ. ಮದುವೆಯಾಗಿದ್ದಕ್ಕೆ ಯುವತಿ ಜತೆ ಜಗಳವಾಡಿದ್ದಾನೆ.
ನನ್ನ ಬಿಟ್ಟು ಯಾರನ್ನೂ ಮದುವೆ ಆಗಬಾರದು ಎಂದು ಕೂಗಾಡಿದ್ದಾನೆ. ಬಳಿಕ ಅಡುಗೆ ಕೋಣೆಯಿಂದ ಚಾಕು ತಂದು ಆಕೆಯ ಕುತ್ತಿಗೆ, ಕೈ, ತೊಡೆ ಹಾಗೂ ಪಕ್ಕೆಲುಬುಗಳಿಗೆ ಇರಿದಿದ್ದಾನೆ. ಬಳಿಕ ತಾನೂ ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಕೆಲ ಸಮಯದ ಬಳಿಕ ಇಬ್ಬರಿಗೂ ರಕ್ತಸ್ರಾವವಾಗಿ ಕುಸಿದುಬಿದ್ದಿದ್ಧಾರೆ.
ಮನೆಯಿಂದ ಕೂಗಾಟ ಚೀರಾಟ ಕೇಳಿ ಸ್ಥಳೀಯರು ಮನೆಯೊಳಗೆ ಧಾವಿಸಿದಾಗ ನವಾಜ್ ಮತ್ತು ನಂದಿನಿ ಇಬ್ಬರೂ ರಕ್ತದ ಮುಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಸದ್ಯ ಯುವತಿ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿ ಕೂಡ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.